Thursday, March 30, 2023

Latest Posts

ʼಷೇರುಬೆಂಬಲಿತ ಎಲ್ಲಾ ಸಾಲಗಳನ್ನೂ ತೀರಿಸಲಾಗಿದೆʼ- ಮಾಹಿತಿ ಹಂಚಿಕೊಂಡ ಅದಾನಿ ಸಮೂಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದೊಂದು ತಿಂಗಳಿನಿಂದ ಭಾರೀ ಚರ್ಚೆಯಲ್ಲಿರುವ ಗೌತಮ್‌ ಅದಾನಿಯವರ ಅದಾನಿ ಸಮೂಹವು ತನ್ನ ಎಲ್ಲಾ ಷೇರುಬೆಂಬಲಿತ ಸಾಲಗಳನ್ನು ತೀರಿಸಿರುವುದಾಗಿ ಹೇಳಿದೆ. ಅಮೆರಿಕದ ಶಾರ್ಟ್‌ ಸೆಲ್ಲರ್‌ ಹಿಂಡನ್‌ ಬರ್ಗ್‌ ತನಿಖಾ ಸಂಸ್ಥೆಯು ಅದಾನಿ ಸಮೂಹವು ಹೆಚ್ಚಿನ ಸಾಲವನ್ನು ಹೊಂದಿದ್ದು ಮಾರುಕಟ್ಟೆ ಅಕ್ರಮ ಮಾಡಿರುವುದಾಗಿ ಆರೋಪಿಸಿತ್ತು. ಇದರ ಪರಿಣಾಮ ಷೇರುಮಾರುಕಟ್ಟೆಯಲ್ಲಿ ಅದಾನಿ ಸಮೂಹವು ಭಾರೀ ನಷ್ಟ ಅನುಭವಿಸಿತ್ತು.

ವಾರಗಳ ಕಾಲ ಅದಾನಿ ಷೇರುಗಳು ಲಕ್ಷಾಂತರ ಕೋಟಿ ರೂ. ಹಣ ಕಳೆದುಕೊಂಡಿದ್ದವು. ಹೀಗಾಗಿ ಹೂಡಿಕೆದಾರರಿಗೆ ಸಕಾರಾತ್ಮಕ ಭಾವನೆ ಮೂಡಿಸಲು ಸಾಲಗಳನ್ನು ಅವಧಿಗೂ ಮುನ್ನವೇ ಪಾವತಿ ಮಾಡಲು ಅದಾನಿ ಸಮೂಹವು ಕ್ರಮ ಕೈಗೊಂಡಿತ್ತು. ಮೊನ್ನೆಯಷ್ಟೇ 7 ಸಾವಿರ ಕೋಟಿ ರೂಪಾಯಿಗೂ ಅಧಿಕ ಷೇರು ಬೆಂಬಲಿತ ಸಾಲವನ್ನುಅದಾನಿ ಸಮೂಹ ತೀರಿಸಿರುವುದಾಗಿ ಹೇಳಿಕೊಂಡಿದೆ. ಇದಕ್ಕೂ ಮೊದಲೂ ಅದಾನಿ ಸಮೂಹ ತನ್ನ ಇತರ ಕಂಪನಿಗಳ ಹೆಸರಿನಲ್ಲಿನ ಕೆಲ ಸಾಲಗಳನ್ನು ಪೂರ್ವ ಪಾವತಿ ಮಾಡಿತ್ತು.

ಪ್ರಸ್ತುತ ಷೇರುಬೆಂಬಲಿತ ಎಲ್ಲಾ ಸಾಲಗಳನ್ನು ತೀರಿಸಲಾಗಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಗಳು ಲಂಡನ್ನಿನಲ್ಲಿನ ಸಭೆಯೊಂದರಲ್ಲಿ ಹೂಡಿಕೆದಾರರಿಗೆ ತಿಳಿಸಿದ್ದಾರೆ ಎಂದು ಬ್ಲೂಮ್‌ ಬರ್ಗ್‌ ವರದಿಯೊಂದು ಹೇಳಿದೆ. ಹೂಡಿಕೆದಾರರ ನಕಾರಾತ್ಮಕ ಭಾವನೆ ಹೋಗಲಾಡಿಸಲು ಅದಾನಿ ಸಮೂಹ ವಿಶ್ವವ್ಯಾಪಿ ರೋಡ್‌ ಶೋ ಗೆ ಮುಂದಾಗಿದ್ದು ಈ ಸಭೆ ರೋಡ್‌ಶೋನ ಭಾಗವಾಗಿದೆ. ಅದಾನಿ ಸಮೂಹವು ತನ್ನ ಹಣಕಾಸು ನಿಯಂತ್ರಣದಲ್ಲಿದೆ ಎಂದು ಹೂಡಿಕೆದಾರರಿಗೆ ಭರವಸೆ ನೀಡುವ ಗುರಿ ಹೊಂದಿದೆ.

ಲಭ್ಯವಿರೋ ಮಾಹಿತಿಯ ಪ್ರಕಾರ ಬುಧವಾರದಂದು ಅದಾನಿ ಸಮೂಹವು ಹೆಚ್ಚುವರಿಯಾಗಿ 500ಮಿಲಿಯನ್‌ ಬ್ರಿಡ್ಜ್‌ ಲೋನ್‌ ಅನ್ನೂ ಕೂಡ ಮರುಪಾವತಿ ಮಾಡಿದೆ ಎನ್ನಲಾಗಿದ್ದು ಸಾಲಮರುಪಾವತಿಯ ಮೂಲಕ ಹೂಡಿಕೆದಾರರ ಭಾವನೆ ಕಾಪಾಡಲು ಅದಾನಿ ಸಮೂಹ ಮುಂದಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!