ರಾಹುಲ್‌ ಗಾಂಧಿ ದ್ವಿಪೌರತ್ವ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಅಲಹಾಬಾದ್‌ ಕೋರ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ದ್ವಿಪೌರತ್ವ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ವಜಾಗೊಳಿಸಿದೆ.

ರಾಹುಲ್ ಗಾಂಧಿ ಭಾರತ ಮತ್ತು ಬ್ರಿಟನ್ ಎರಡೂ ದೇಶಗಳ ನಾಗರಿಕರಾಗಿದ್ದಾರೆ ಮತ್ತು ಈ ಆಧಾರದ ಮೇಲೆ ಅವರು ಸಂವಿಧಾನದ 84 (A) ನೇ ವಿಧಿಯನ್ವಯ ಚುನಾವಣೆಗೆ ಸ್ಪರ್ಧಿಸಲು ಅನರ್ಹರು ಎಂದು ಅರ್ಜಿಯಲ್ಲಿ ಕರ್ನಾಟಕದ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಶಿಶಿರ್ ಆರೋಪ ಮಾಡಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳ ವರದಿ ಕೋರಿತ್ತು. ಸರ್ಕಾರದ ವರದಿ ಸಲ್ಲಿಕೆ ಮಾಡದ ಕಾರಣ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿ, ಯಾವುದೇ ಕಾನೂನುಬದ್ಧ ಆಧಾರಗಳಿಲ್ಲ ಎಂದು ಹೇಳಿದೆ.

ಈ ವಿಷಯದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮತ್ತು ಅರ್ಜಿದಾರರಿಗೆ ತಕ್ಷಣ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ನಿರ್ದೇಶಿಸಿದೆ. ಕೇಂದ್ರ ಸರ್ಕಾರವು ಅಂತಿಮ ನಿರ್ಧಾರವನ್ನು ತೆಗೆದುಕೊಂಡ ನಂತರ ನ್ಯಾಯಾಲಯವನ್ನು ಮತ್ತೆ ಸಂಪರ್ಕಿಸಲು ನ್ಯಾಯಾಲಯ ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿದೆ.

ನ್ಯಾಯಮೂರ್ತಿ ಎ.ಆರ್. ಮಸೂದಿ ಮತ್ತು ನ್ಯಾಯಮೂರ್ತಿ ರಾಜೀವ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರವು ಅರ್ಜಿದಾರರ ದೂರನ್ನು ಪರಿಹರಿಸಲು ನಿರ್ದಿಷ್ಟ ಸಮಯವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ ಅರ್ಜಿಯನ್ನು ಬಾಕಿ ಇಡಲು ಯಾವುದೇ ಸಮರ್ಥನೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ರಾಹುಲ್ ಗಾಂಧಿ ವಿರುದ್ಧದ ಅರ್ಜಿಯನ್ನು ಸದ್ಯಕ್ಕೆ ಮುಕ್ತಾಯಗೊಳಿಸಲಾಗಿದ್ದರೂ, ಕೇಂದ್ರ ಸರ್ಕಾರವು ಅಂತಿಮ ನಿರ್ಧಾರ ತೆಗೆದುಕೊಂಡ ನಂತರ ಅರ್ಜಿದಾರರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸುವ ಅವಕಾಶವಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!