October 6, 2026
Tuesday, October 6, 2026
spot_img

ಮತದಾರರ ಪಟ್ಟಿಯಿಂದ 5,698 ಹೆಸರು ತೆಗೆದುಹಾಕಿದ ಆರೋಪ : ಬಿಜೆಪಿಯ ಇಬ್ಬರು ಬಿಎಲ್ಎ ವಿರುದ್ಧ ಎಫ್‌ಐಆರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಜಯನಗರದಲ್ಲಿ ಬರೋಬ್ಬರಿ 5,698 ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಯತ್ನ ನಡೆದಿದೆ ಎನ್ನುವ ಆರೋಪದ ಮೇಲೆ ಬಿಜೆಪಿಯ ಜೊತೆ ನಂಟಿ ಹೊಂದಿರುವ ಇಬ್ಬರು ಬೂತ್‌ ಮಟ್ಟದ ಏಜೆಂಟ್‌ಗಳು ಹಾಗೂ ಇಬ್ಬರು ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ಬಗ್ಗೆ ಕಾಂಗ್ರೆಸ್‌ ನಾಯಕಿ ಹಾಗೂ ಕರ್ನಾಟಕ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸೌಮ್ಯಾ ರೆಡ್ಡಿ ದೂರು ನೀಡಿದ್ದು, ಜಯನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ 5,698 ಮತದಾರರ ಹೆಸರುಗಳನ್ನು ತೆಗೆದುಹಾಕಲು ಕೋರಿ ನಕಲಿ ‘ಫಾರ್ಮ್-7’ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ.

ಫಾರ್ಮ್‌ -7 ಅಂದರೇನು?

ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವುದರ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಅಥವಾ ಮತದಾರರ ಹೆಸರನ್ನು ತೆಗೆದುಹಾಕಲು ಕೋರಿ ಫಾರ್ಮ್‌-7ನ್ನು ಬಳಸಲಾಗುತ್ತದೆ. ಸಂಬಂಧಪಟ್ಟ ಮತದಾರರು ಕ್ಷೇತ್ರದಿಂದ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳುವ ಮೂಲಕ ಸಾವಿರಾರು ಮತದಾರರ ಹೆಸರನ್ನು ತೆಗೆದುಹಾಕಲು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಒಪ್ಪಿಗೆಯಿಲ್ಲದೆ ಫಾರ್ಮ್-7

ಆರೋಪಿಗಳಾದ ರಮೇಶ್‌ ಹಾಗೂ ಅವರ ಪತ್ನಿ ರೂಪಾ ಎನ್ನುವವರು ನಿವಾಸಿಗಳ ಗುರುತಿನ ವಿವರಗಳನ್ನು ಅವರ ಅನುಮತಿಯಿಲ್ಲದೆ ಪಡೆದುಕೊಂಡು, ಅವರ ಅರಿವಿಲ್ಲದೆ ಅಥವಾ ಒಪ್ಪಿಗೆಯಿಲ್ಲದೆ ಅವರ ಹೆಸರಿನಲ್ಲಿ ‘ಫಾರ್ಮ್-7’ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಇದರಲ್ಲಿ ಹೇಳಲಾಗಿದೆ. ಜಯನಗರದ 4ನೇ ಬ್ಲಾಕ್‌ನಲ್ಲಿರುವ ಸ್ಥಳೀಯ ಚುನಾವಣಾ ಕಚೇರಿಯಲ್ಲಿ ಬಿಎಲ್‌ಒ ಲೋಕೇಶ್ ಅವರಿಗೆ ನಕಲಿ ಸಹಿಗಳನ್ನು ಹೊಂದಿರುವ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ಆರೋಪವೂ ಇದೆ.

Must Read