ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಪಳನಿ ದೇವಸ್ಥಾನದಲ್ಲಿ ನೀಡುವ ಪಂಚಾಮೃತ ಪ್ರಸಾದಕ್ಕೆ ಪುರುಷರಲ್ಲಿ ದುರ್ಬಲತೆ ಉಂಟುಮಾಡುವ ಔಷಧಿ ಬೆರಸಿದ್ದಾರೆ ಎಂಬ ಹೇಳಿಕೆ ನೀಡಿದ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮೋಹನ್ ಜಿ ಅವರನ್ನು ಬಂಧಿಸಲಾಗಿದೆ.
ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬೆರಸಿದ್ದಾರೆ ಎಂಬ ಆರೋಪದ ಬಗ್ಗೆ ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ಮೋಹನ್ ಮಾತನಾಡುತ್ತಾ, ಪಳನಿ ದೇವಸ್ಥಾನದಲ್ಲಿ ಬಡಿಸುವ ಪಂಚಾಮೃತ ಪ್ರಸಾದಕ್ಕೆ ಪುರುಷರಲ್ಲಿ ದುರ್ಬಲತೆ ಉಂಟುಮಾಡುವ ಔಷಧಿ ಬೆರಸಲಾಗಿದೆ ಎಂದು ಆರೋಪಿಸಿದ್ದರು. ಅವರ ಈ ಹೇಳಿಕೆಯನ್ನು ಆಧರಿಸಿ ತಿರುಚ್ಚಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಚೆನ್ನೈನಲ್ಲಿ ಬಂಧಿಸಿದ್ದು, ತಿರುಚ್ಚಿಗೆ ಕರೆತರಲಾಗುವುದು ಎಂದು ತಿರುಚ್ಚಿ ಜಿಲ್ಲಾ ಎಸ್ಪಿ ವರುಣ್ ಕುಮಾರ್ ತಿಳಿಸಿದ್ದಾರೆ.
ನಿರ್ದೇಶಕ ಮೋಹನ್ ಸಂದರ್ಶನದಲ್ಲಿ ಮಾತನಾಡುವಾಗ, ತಮಿಳುನಾಡಿನಲ್ಲೂ ಇಂತಹ ಘಟನೆಗಳು ನಡೆದಿವೆ. ಪಳನಿ ದೇವಸ್ಥಾನ ಪ್ರಸಾದದಲ್ಲಿ ಪುರುಷರಲ್ಲಿ ಶಕ್ತಿಹೀನತೆ ಉಂಟುಮಾಡುವ ಔಷಧ ಬೆರಸಿದ್ದರು ಅಂತ ಕೇಳಿದ್ದೆ. ಆದ್ರೆ ಅದನ್ನು ಮರೆಮಾಚಲಾಯಿತು. ನಮ್ಮ ಬಳಿ ಸಾಕ್ಷಿಯಿಲ್ಲದ ಕಾರಣ ಏನನ್ನೂ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿಂದೂ ಧಾರ್ಮಿಕ ಮತ್ತು ಧರ್ಮ ದತ್ತಿ ಸಚಿವ ಸೇಕರ್ ಬಾಬು, ಪಳನಿ ದೇವಸ್ಥಾನ ಪಂಚಾಮೃತದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.