ಮಾನವ ಕಳ್ಳಸಾಗಣೆ ಆರೋಪ: ದೇಹದಾರ್ಢ್ಯ ಪಟು ಬಾಬಿ ಕಟಾರಿಯಾ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಾನವ ಕಳ್ಳಸಾಗಣೆ ಆರೋಪದ ಮೇಲೆದೇಹದಾರ್ಢ್ಯ ಪಟು ಬಾಬಿ ಕಟಾರಿಯಾ ಅವರನ್ನು ಹರಿಯಾಣ ಪೊಲೀಸರು ಇಂದು (ಮಂಗಳವಾರ) ಬಂಧಿಸಿದ್ದಾರೆ.

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕಟಾರಿಯಾ ₹4 ಲಕ್ಷ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಇಬ್ಬರು ವ್ಯಕ್ತಿಗಳು ಗುರುಗ್ರಾಮ ಪೊಲೀಸರಿಗೆ ದೂರು ನೀಡಿದ್ದರು.

ಕೇಂದ್ರ ತನಿಖಾ ಸಂಸ್ಥೆಯ ಮಾಹಿತಿಯ ಮೇರೆಗೆ ಕಟಾರಿಯಾರನ್ನು ಬಂಧಿಸಲಾಗಿದೆ. ಆತನ ವಿರುದ್ಧ ಮಾನವ ಕಳ್ಳಸಾಗಣೆ ಸೇರಿದಂತೆ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿ ಸಂದೀಪ್ ಕುಮಾರ್ ತಿಳಿಸಿದ್ದಾರೆ.

ಬಾಬಿ ಕಟಾರಿಯಾ ಅವರು ಯುಎಇಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಉತ್ತರ ಪ್ರದೇಶದ ಫತೇಪುರ್‌ನ ಇಬ್ಬರು ವ್ಯಕ್ತಿಗಳಿಂದ ₹4 ಲಕ್ಷ ಹಣ ಪಡೆದಿದ್ದರು. ಬಳಿಕ ಅವರನ್ನು ಯುಎಇಗೆ ಕರೆದುಕೊಂಡು ಹೋಗುವ ಬದಲು ಬೇರೆ ದೇಶಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ಮೂರು ದಿನಗಳ ಕಾಲ ನಕಲಿ ಕಾಲ್ ಸೆಂಟರ್‌ವೊಂದರಲ್ಲಿ ಕೆಲಸ ಮಾಡಲು ಒತ್ತಡ ಹೇರಿದ್ದರು. ಬಳಿಕ ಅಲ್ಲಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿಗಳು ಭಾರತೀಯ ರಾಯಭಾರ ಕಚೇರಿ ಮೊರೆ ಹೋಗಿದ್ದರು. ಇದಾದ ಕೆಲ ದಿನಗಳ ಬಳಿಕ ಭಾರತಕ್ಕೆ ವಾಪಸ್‌ ಆದ ವ್ಯಕ್ತಿಗಳು ಕಟಾರಿಯಾ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಟಾರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಟಾರಿಯಾ ಅವರ ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಗಳಲ್ಲಿ ವಿದೇಶದಲ್ಲಿ ಉದ್ಯೋಗ ಕೊಡಿಸುವ ಮಾಹಿತಿಯುಳ್ಳ ಜಾಹೀರಾತು ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಈ ಪೋಸ್ಟರ್‌ ಅನ್ನು ನೋಡಿ ವಂಚನೆಗೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2022ರಲ್ಲಿ ಬಾಬಿ ಕಟಾರಿಯಾ ಅವರು ಸ್ಪೈಸ್‌ಜೆಟ್‌ ವಿಮಾನದಲ್ಲಿ ಧೂಮಪಾನ ಮಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.ಸ್ಪೈಸ್‌ಜೆಟ್‌ ವಿಮಾನದ ಹಿಂಬದಿಯ ಆಸನದಲ್ಲಿ ಕುಳಿತಿದ್ದ ಬಾಬಿ, ಲೈಟರ್‌ನಿಂದ ಸಿಗರೇಟ್‌ ಹಚ್ಚುತ್ತಿರುವ ದೃಶ್ಯವು ವಿಡಿಯೊದಲ್ಲಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!