ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ನಿಲಂಬೂರಿನಿಂದ ಶೋರ್ನೂರ್ ಕಡೆಗೆ ಹೊರಟಿದ್ದ ರಾಜಾರಾಣಿ ಎಕ್ಸ್‌ಪ್ರೆಸ್ ರೈಲಿನಲ್ಲಿ 25 ವರ್ಷದ ಮಹಿಳೆಗೆ ಹಾವು ಕಚ್ಚಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದ್ರೆ ರೈಲ್ವೇಸ್ (Railways), ಮಹಿಳೆಗೆ ರೈಲಿನಲ್ಲಿ ಕಚ್ಚಿರೋದು ಹಾವಲ್ಲ , ವಿಷಕಾರಿಯಲ್ಲದ ಯಾವುದೋ ಸರಿಸೃಪ ಅಥವಾ ಪ್ರಾಣಿ ಕಚ್ಚಿರಬಹುದು ಎಂದು ತಿಳಿಸಿದೆ.
ಜೊತೆಗೆ ಯಾವ ಪ್ರಾಣಿ ಅನ್ನೋದನ್ನ ತನಿಖೆ ಮಾಡುತ್ತಿರುವುದಾಗಿ ಹೇಳಿದೆ.
ಪೂಕೊಟ್ಟುಂಪದಂ ನಿವಾಸಿ ಆಯುರ್ವೇದ ವೈದ್ಯೆಯಾಗಿರುವ ಡಾ.ಟಿ.ಪಿ.ಗಾಯತ್ರಿ (25) ಮಂಗಳವಾರ ಶೋರ್ನೂರ್ ವಿಷ್ಣು ಆಯುರ್ವೇದ ಆಸ್ಪತ್ರೆಗೆ ತೆರಳಬೇಕಿತ್ತು. ವಾಣಿಯಂಬಲಂನಿಂದ ಗಾಯತ್ರಿ ರೈಲು ಹತ್ತಿದ್ದರು. ವಲ್ಲಪುಳ ತಲುಪುವ ಮುನ್ನ ನನ್ನ ಕಾಲಿಗೆ ಏನೋ ಕಚ್ಚಿದ ಅನುಭವವಾಯಿತು. ಸಣ್ಣದಾಗಿ ಕಚ್ಚಿದ ಗುರುತು ಕೂಡ ಕಾಣಿಸಿತು. ನಂತರ ವಲ್ಲಪುಳ ನಿಲ್ದಾಣದಲ್ಲಿ ಇಳಿದು ಪೆರಿಂತಲ್ಮನ್ನ ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ಗಾಯತ್ರಿ ಅವರಿಗೆ ರಕ್ತ ಪರೀಕ್ಷೆಯನ್ನೂ ಮಾಡಲಾಗಿದೆ. ಮೂರು ಗಂಟೆಗಳ ಕಾಲ, ಅಬ್ಸರ್ವೇಷನ್‌ನಲ್ಲಿ ಇಡಲಾಗಿತ್ತು. ವೈದ್ಯರು ಕೂಡ ಪ್ರತಿ ಗಂಟೆಗೆ ರೋಗಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಆದರೆ, ಗಾಯತ್ರಿ ಅವರಿಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಲಿಲ್ಲ. ಈ ಹಂತದಲ್ಲಿ ಅವರು ಆರೋಗ್ಯವಾಗಿದ್ದರು ಎಂದು ತಿಳಿಸಿದ್ದಾರೆ. ರಕ್ತ ಪರೀಕ್ಷೆಯ ವರದಿಯಲ್ಲೂ ಅವರ ದೇಹದಲ್ಲಿ ಯಾವುದೇ ವಿಷಕಾರಿ ಅಂಶಗಳಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ ಗಾಯತ್ರಿ ಅವರು ಪ್ರಯಾಣ ಮಾಡುತ್ತಿದ್ದ ಕಂಪಾರ್ಟ್‌ಮೆಂಟ್‌ಅನ್ನು ರೈಲ್ವೆ ಅಧಿಕಾರಿಗಳು ಖಾಲಿ ಮಾಡಿಸಿದ್ದರು. ಖಾಲಿ ಕಂಪಾರ್ಟ್‌ಮೆಂಟ್‌ನೊಂದಿಗೆ ರೈಲು ನಿಲಂಬೂರಿಗೆ ತೆರಳಿತ್ತು. ಈ ವೇಳೆ ರೈಲ್ವೆ ಪೊಲೀಸರಲ್ಲದೆ, ಅರಣ್ಯ ಇಲಾಖೆಯ ವಾನಂ ಸೆಕ್ಷನ್‌ನ ಅಧಿಕಾರಿಗಳು ಕೂಡ ಕಂಪಾರ್ಟ್‌ಮೆಂಟ್‌ಅನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿದರು.ಈ ವೇಳೆ ರೈಲಿನಲ್ಲಿ ಯಾವುದೇ ಹಾವು ಪತ್ತೆಯಾಗಿಲ್ಲ. ಬಹುಶಃ ಆಕೆಯ ಕಾಲಿಗೆ ಇಲಿ ಕಚ್ಚಿರಬಹುದು ಎಂದು ರೈಲ್ವೆ ಮತ್ತು ಆಸ್ಪತ್ರೆ ಅಧಿಕಾರಿಗಳು ಸದ್ಯಕ್ಕೆ ತೀರ್ಮಾನಿಸಿದ್ದಾರೆ.