ಕೊಡಗು ವಿವಿ ಪಾವಿತ್ರ್ಯತೆಗೆ ಧಕ್ಕೆ ಆರೋಪ: ಹಿತರಕ್ಷಣಾ ಬಳಗದಿಂದ ಪ್ರತಿಭಟನೆ

 ಹೊಸ ದಿಗಂತ ವರದಿ, ಕುಶಾಲನಗರ:

ಕೊಡಗು ವಿಶ್ವವಿದ್ಯಾಲಯದ ಘನತೆ ಹಾಗೂ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡಿ ಕೆಲವರು ಅರಾಜಕತೆ ಸೃಷ್ಠಿಸುತ್ತಿದ್ದು, ಅಂತಹ ಶಕ್ತಿಗಳನ್ನು ವಿಶ್ವವಿದ್ಯಾಲಯದಿಂದ ದೂರುವಿಡುವಂತೆ ಆಗ್ರಹಿಸಿ ಕೊಡಗಿನ ವಿ.ವಿ ಹಿತರಕ್ಷಣಾ ಬಳಗದಿಂದ ವಿವಿ ಹೊರ ಆವರಣದಲ್ಲಿ ಪ್ರತಿಭಟನೆ ನಡೆಯಿತು.

ಹಿತರಕ್ಷಣಾ ಬಳಗದ ಪ್ರಮುಖರಾದ ಕೆ.ಎಸ್.ಕೃಷ್ಣೇಗೌಡ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು, ಗ್ರಾಮಸ್ಥರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೊಡಗು ವಿವಿಯ ಅಸ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿ ಧಿಕ್ಕಾರ ಕೂಗಲಾಯಿತು.

ಕೊಡಗಿನ ಜನತೆಯ ದಶಕಗಳ ಕನಸಿನಂತೆ ಮಂಗಳೂರು ವಿವಿಯಿಂದ ಬೇರ್ಪಟ್ಟು ಸ್ವತಂತ್ರ ವಿವಿಯಾಗಿ ಅಸ್ತಿತ್ವಕ್ಕೆ ಬಂದ ಕೊಡಗು ವಿವಿಗೆ ಕಳಂಕ ತರುವ ರೀತಿಯಲ್ಲಿ ಕೆಲವು ಪಟ್ಟಭದ್ರ ಮನಸ್ಥಿತಿಯವರು ವರ್ತಿಸುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಶೈಕ್ಷಣಿಕ ಚಟುವಟಿಕೆಗಳು, ದಾಖಲಾತಿಗೆ ಹಿನ್ನಡೆ ಉಂಟಾಗುತ್ತಿದೆ ಎಂದು ಪ್ರಮುಖರಾದ ನಟೇಶ್ ಗೌಡ, ಟಿ.ಬಿ.ಜಗದೀಶ್ ಆರೋಪಿಸಿದರು.

ವಿಶ್ವವಿದ್ಯಾಲಯದ ಬೆಳವಣಿಗೆಗೆ ಶ್ರಮಿಸಬೇಕಾದ ಕೆಲವು ಬೋಧಕ, ಬೋಧಕೇತರ ಸಿಬ್ಬಂದಿಗಳು ತಮ್ಮ ಸ್ವಹಿತಾಸಕ್ತಿ ಹಾಗೂ ಸ್ವಾರ್ಥ ಸಾಧನೆಗೆ ಶೈಕ್ಷಣಿಕ ಪರಿಸರಕ್ಕೆ ಮಾರಕವಾಗುತ್ತಿದ್ದಾರೆ. ರಾಜ್ಯಪಾಲರ ಸುತ್ತೋಲೆಯಂತೆ ಹೆಚ್ಚುವರಿ ಬೋಧಕ‌, ಬೋಧಕೇತರ ಸಿಬ್ಬಂದಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಅಂತಹ 20 ಮಂದಿ ಕೊಡಗು ವಿವಿ ಖ್ಯಾತಿಗೆ ಮಸಿ ಬಳಿಯುವ ರೀತಿಯಲ್ಲಿ ಜಾತಿಗಳನ್ನು ಎತ್ತಿಕಟ್ಟಿ ಹೋರಾಟದ ಹೆಸರಿನಲ್ಲಿ ಅರಾಜಕತೆ ಸೃಷ್ಠಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆ.ಎಸ್.ಕೃಷ್ಣೇಗೌಡ ಮಾತನಾಡಿ, ಕೊಡಗು ವಿವಿಯ ಅಸ್ತಿತ್ವ ಉಳಿಸಬೇಕೆನ್ನುವ ನಿಟ್ಟಿನಲ್ಲಿ ಸಾಮಾಜಿಕ ಹೋರಾಟಗಾರರು, ಪ್ರಗತಿಪರರು, ಚಿಂತಕರು, ಪ್ರಜ್ಞಾವಂತರು ಒಗ್ಗೂಡಿ ಈ ಹೋರಾಟ ರೂಪಿಸಿಸಿದ್ದಾರೆ. ವಿವಿಯ ಕುಲಪತಿ, ರಿಜಿಸ್ಟ್ರಾರ್’ಗಳಿಗೆ ಕೆಲವರು ಮಾನಸಿಕ ಹಿಂಸೆ‌ ನೀಡುತ್ತಿದ್ದಾರೆ. ಇದು ಶೈಕ್ಷಣಿಕ ಅಸಮತೋಲನ‌ ಉಂಟುಮಾಡಲಿದೆ. ನಮ್ಮ ಈ ಹೋರಾಟದ ಮೂಲಕ ಕುಲಪತಿ, ರಿಜಿಸ್ಟ್ರಾರ್’ಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.

ಕೊಡಗು ವಿವಿಯ ಆಡಳಿತಾತ್ಮಕ, ಆಡಳಿತೇತರ ಚಟುವಟಿಕೆಗಳನ್ನು ವಿರೋಧಿಸುವ ಶಕ್ತಿಗಳ‌ ನಿಲುವು ಬದಲಾಗಬೇಕಿದೆ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ವಿವಿಯ ಅತಿಥಿ ಉಪನ್ಯಾಸಕನೋರ್ವ ವಿದ್ಯಾರ್ಥಿನಿಯರಿಗೆ ಮಾನಸಿಕ‌ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ಆ ಉಪನ್ಯಾಸಕನನ್ನು ವಿವಿಯಿಂದ ತಕ್ಷಣ ಕೈಬಿಡಬೇಕಿದೆ. ತಪ್ಪಿದಲ್ಲಿ ವಿವಿ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ನುಡಿದರು.
ಪ್ರತಿಭಟನೆಯಲ್ಲಿ ಬಳಗದ ಪ್ರಮುಖರಾದ ಎಚ್.ಟಿ.ದಿನೇಶ್, ಮಂಜುನಾಥ್, ಎಂ.ಎಸ್.ಶಾಂತಿ, ಟಿ.ಜಿ.ಶಿವಪ್ಪ, ಎಸ್.ಎಸ್.ಚಂದ್ರಶೇಖರ್, ಎನ್.ಎಸ್.ರಮೇಶ್, ಹಾರುವಯ್ಯ, ಶಿವಶಂಕರ್, ಪಿ.ಡಿ.ರವಿಕುಮಾರ್, ಉದಯಕುಮಾರ್, ಶುಂಠಿ ಶೇಖರ್, ಪ್ರದೀಪ್ ರೆಡ್ಡಿ, ಗುರುಲಿಂಗಪ್ಪ, ಸಂಜೀವಯ್ಯ, ಸಂತೋಷ್ ಮತ್ತಿತರರು ಇದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!