ಕೇರಳ- ಕರ್ನಾಟಕ ಗಡಿ ಬಂಡೀಪುರದಲ್ಲಿ ನೈಟ್ ಸಂಚಾರಕ್ಕೆ ಅವಕಾಶ?: ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೇರಳ ಕರ್ನಾಟಕ ಗಡಿ ಭಾಗ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಮಾಡಿಕೊಡುವುದೇ ನನ್ನ ಗುರಿ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದಾರೆ.

ವಯನಾಡಿನ ನೂತನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಹೋದರ ರಾಹುಲ್ ಗಾಂಧಿ ಜೊತೆಗೂಡಿ ಕ್ಷೇತ್ರ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಮಾಡಿಕೊಡುವುದೇ ನನ್ನ ಗುರಿ ಎಂದು ಭರವಸೆ ನೀಡಿದ್ದಾರೆ.

ಬಂಡೀಪುರ ಭಾಗದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಇಲ್ಲದಿರುವುದರಿಂದ ನಿಮಗೆ ಎಷ್ಟು ಸಮಸ್ಯೆ ಆಗ್ತಿದೆ ಎಂಬುದು ನನಗೆ ಗೊತ್ತಾಗಿದೆ. ಈ ವಿಷಯ ನನಗೆ ಬಿಡಿ.. ಈ ಸಮಸ್ಯೆ ಇತ್ಯರ್ಥ ಮಾಡುವುದೇ ನನ್ನ ಗುರಿ ಎಂದು ತಿಳಿಸಿದ್ದಾರೆ.

ನನಗೆ ನೈಟ್ ಬ್ಯಾನ್ ವಿಚಾರವೂ ಗೊತ್ತು. ಮನುಷ್ಯ-ಪ್ರಾಣಿಗಳ ನಡುವಿನ ಸಂಘರ್ಷದ ವಿಚಾರವೂ ಗೊತ್ತು. ನಿಮ್ಮೆಲ್ಲರ ಪರವಾಗಿ ನಾನು ಹೋರಾಡುತ್ತೇನೆ. ನನ್ನ ಮನೆ, ಕಚೇರಿ ನಿಮಗಾಗಿ ತೆರೆದಿರುತ್ತದೆ. ನಾನು ನಿಮ್ಮನ್ನು ನಿರಾಸೆಗೊಳಿಸಲ್ಲ ಎಂದು ಜನರಿಗೆ ಅಭಯ ನೀಡಿದ್ದಾರೆ.

ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರ ಪರ ಪ್ರಚಾರದ ರ‍್ಯಾಲಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ರಾತ್ರಿ ಪ್ರಯಾಣದ ನಿರ್ಬಂಧವನ್ನು ತೆಗೆದುಹಾಕಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.

ಪ್ರಿಯಾಂಕಾ ಗಾಂಧಿ ಅವರು ಎರಡು ದಿನಗಳ ಹಿಂದೆ ತಮ್ಮನ್ನು ಕರೆದಿದ್ದರು. ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ರಾತ್ರಿ ಸಂಚಾರ ನಿಷೇಧ ಹೇರಿರುವ ಬಗ್ಗೆ ಚರ್ಚೆ ಮಾಡಲು ಕರ್ನಾಟಕಕಕ್ಕೆ ಬರುವುದಾಗಿ ಹೇಳಿದ್ದಾರೆಂದು ಡಿಕೆಶಿ ತಿಳಿಸಿದ್ದರು.

2009ರಿಂದ ಬಂಡೀಪುರದಲ್ಲಿ ಊಟಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 67 ಹಾಗೂ ಕೇರಳದ ಸುಲ್ತಾನ್ ಬತ್ತೇರಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ವನ್ಯಜೀವಿ ರಕ್ಷಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ 2009 ರಲ್ಲಿ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ವರೆಗೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿತ್ತು. ಇದಕ್ಕೆ ಕೇರಳದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ, ಕರ್ನಾಟಕ ತನ್ನ ನಿಲುವನ್ನು ಸಡಿಲಿಸಿರಲಿಲ್ಲ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!