ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೆದ್ದಾಗ ವಿದ್ಯುನ್ಮಾನ ಮತಯಂತ್ರಗಳನ್ನು (EVM) ದೂರದೇ, ಚುನಾವಣೆಯಲ್ಲಿ ಸೋತಾಗ ದೂರುವುದನ್ನು ನಿಲ್ಲಿಸಿ ಫಲಿತಾಂಶವನ್ನು ಸ್ವೀಕರಿಸಿ ಎಂದು ಕಾಂಗ್ರೆಸ್ ಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಖಡಕ್ ಸಂದೇಶ ನೀಡಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕುರಿತು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪ್ರಶ್ನೆಗಳನ್ನು ಎತ್ತಿದ್ದು, ಬ್ಯಾಲೆಟ್ ಪೇಪರ್ ಮತಎಣಿಕೆಗೆ ಮರಳುವಂತೆ ಒತ್ತಾಯಿಸುತ್ತಿರುವ ಸಂದರ್ಭ ನ್ಯಾಷನಲ್ ಕಾನ್ಫರೆನ್ಸ್ ನಾಯಕನ ಹೇಳಿಕೆ ಮೈತ್ರಿಕೂಟದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ಫಲಿತಾಂಶಗಳು ನಿರೀಕ್ಷೆಗಳನ್ನು ಪೂರೈಸದಿದ್ದಾಗ ಮಾತ್ರ ಇವಿಎಂಗಳನ್ನು ಪ್ರಶ್ನಿಸುವುದು ತಪ್ಪು. ನೀವು ಬಯಸಿದ ಫಲಿತಾಂಶ ಸಿಗದಿದ್ದಾಗ ಇವಿಎಂನತ್ತ ಬೊಟ್ಟು ಮಾಡಬಾರದು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ನೀವು ಅದೇ ಇವಿಎಂಗಳನ್ನು ಬಳಸಿಕೊಂಡು ಸಂಸತ್ತಿನಲ್ಲಿ ನೂರಕ್ಕೂ ಹೆಚ್ಚು ಸದಸ್ಯರನ್ನು ಪಡೆದಿದ್ದೀರಿ. ಅದನ್ನು ನಿಮ್ಮ ಪಕ್ಷಕ್ಕೆ ಒಂದು ರೀತಿಯ ವಿಜಯವೆಂದು ನೀವು ಆಚರಿಸಿದ್ದೀರಿ. ನಂತರ ಇವಿಎಂಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ ಈಗ ಚುನಾವಣಾ ಫಲಿತಾಂಶಗಳು ನಾವು ಬಯಸಿದ ರೀತಿಯಲ್ಲಿ ಬರದ ಮಾತ್ರಕ್ಕೆ ದೂರುವುದು ಸರಿಯಲ್ಲ ಎಂದು ಅಬ್ದುಲ್ಲಾ ಹೇಳಿದರು.
ಇದು ನಿಮ್ಮ ಮಿತ್ರಪಕ್ಷ ಕಾಂಗ್ರೆಸ್ ವಾದಕ್ಕೆ ವಿರುದ್ಧವಾಗಿದೆ ಎಂದು ಪ್ರಶ್ನಿಸಿದಾಗ..ಯಾವುದು ಸರಿಯೋ ಅದನ್ನು ಸರಿ ಅಂತಲೇ ಹೇಳಬೇಕಾಗುತ್ತದೆ ಎಂದು ಒಮರ್ ಅಬ್ದುಲ್ಲಾ ಖಡಕ್ ಆಗಿ ಹೇಳಿದ್ದಾರೆ.
ನಿಮಗೆ ಇವಿಎಂಗಳಲ್ಲಿ ಸಮಸ್ಯೆಗಳಿದ್ದರೆ, ಆ ಸಮಸ್ಯೆಗಳಲ್ಲಿ ನೀವು ಬದ್ಧರಾಗಿರಬೇಕು. ಮತದಾನದ ವಿಧಾನವನ್ನು ನಂಬದಿದ್ದರೆ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಬಾರದು. ಲೋಕಸಭೆ ಚುನಾವಣೆಯಲ್ಲಿ ಸೋತು ತಿಂಗಳ ನಂತರ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸಿದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ‘ಒಂದು ದಿನ ಮತದಾರರು ನಿಮ್ಮನ್ನು ಆಯ್ಕೆ ಮಾಡುತ್ತಾರೆ, ಮರುದಿನ ಅವರು ಬೇರೆಯವರನ್ನು ಆಯ್ಕೆ ಮಾಡುತ್ತಾರೆ, ನಾನು ಎಂದಿಗೂ ಯಂತ್ರಗಳನ್ನು ದೂಷಿಸಲಿಲ್ಲ’ ಎಂದರು.