ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ನೂತನ ಡಿಜಿ ಹಾಗೂ ಐಜಿಪಿಯಾಗಿ ಅಲೋಕ್ ಮೋಹನ್ ಇಂದು ಅಧಿಕಾರ ವಹಿಸಿಕೊಂಡರು.
ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕದಳದ ಮುಖ್ಯಸ್ಥರಾಗಿರುವ ಅಲೋಕ್ ಮೋಹನ್ ಅವರು ಹೆಚ್ಚುವರಿಯಾಗಿ ಡಿಜಿ-ಐಜಿಪಿಯಾಗಿ ಅಧಿಕಾರವನ್ನು ಸಿಬಿಐ ನಿರ್ದೇಶಕರಾಗಿ ಕೇಂದ್ರ ಸೇವೆಗೆ ತೆರಳುತ್ತಿರುವ ಪ್ರವೀಣ್ ಸೂದ್ ಅವರಿಂದ ಸ್ವೀಕರಿಸಿದರು.
ಬೆಂಗಳೂರಿನ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಿತು. ಬಳಿಕ ಮಾತನಾಡಿದ ಅಲೋಕ್ ಮೋಹನ್, ಡಿಜಿ ಹಾಗೂ ಐಜಿಪಿ ಆಗಿ ಅಧಿಕಾರ ಸ್ವೀಕರಿಸಿದ್ದೇನೆ. ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಕಾನೂನು ಸುವ್ಯವಸ್ಥೆ ಕರ್ನಾಟಕದಲ್ಲಿ ಸಮರ್ಪಕವಾಗಿ ಇದೆ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ನಮ್ಮ ಮೊದಲ ಆದ್ಯತೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಕ್ರೈಮ್ಗೆ ಕಡಿವಾಣಕ್ಕೆ ಆದ್ಯತೆ ನೀಡಲಾಗುತ್ತದೆ. ಠಾಣೆಗೆ ಬರುವ ಎಲ್ಲ ದೂರುಗಳನ್ನು ಸ್ವೀಕರಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಪೊಲೀಸರಿಗೆ ಮತ್ತಷ್ಟು ಹೆಚ್ಚಿನ ಟೆಕ್ನಿಕಲ್ ಟ್ರೈನಿಂಗ್ ನೀಡಲಾಗುವುದು. ಟ್ರಾಫಿಕ್ ಮ್ಯಾನೇಜ್ಮೆಂಟ್ ಕೂಡ ಮುಖ್ಯವಾಗಿದೆ. ಟ್ರಾಫಿಕ್ ಜಾಮ್ ಆಗದಂತೆ ಗಮನ ನೀಡಲಿದ್ದೇವೆ ಎಂದು ಅವರು ಭರವಸೆ ನೀಡಿದರು.
ಯಾವುದೇ ಕಾರಣಕ್ಕೂ ಸಂಘಟಿತ ಅಪರಾಧಗಳನ್ನು ಸಹಿಸುವುದಿಲ್ಲ. ಮಾದಕ ವಸ್ತು ಸಂಪೂರ್ಣವಾಗಿ ನಿರ್ಬಂಧಿಸುವುದು ನಮ್ಮ ಗುರಿ. ಮಾನವ ಹಕ್ಕುಗಳನ್ನು ಗೌರವಿಸಿ, ಆ ಕುರಿತು ಜನರಿಗೆ ಅರಿವು ಮೂಡಿಸುತ್ತೇವೆ ಎಂದರು.
ಮೂರ್ನಾಲ್ಕು ದಿನಗಳ ಬಳಿಕ ಡಿಜಿ-ಐಜಿಪಿಯಾಗುವ ರಾಜ್ಯದ ಐವರು ಅಧಿಕಾರಿಗಳ ಹೆಸರನ್ನು ಯುಪಿಎಸ್ ಸಿಗೆ ಕಳುಹಿಸಿ ಅಲೋಕ್ ಮೋಹನ್ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಿದೆ. ಅಲ್ಲಿಂದ ಅಲೋಕ್ ಮೋಹನ್ ಅವರು ರಾಜ್ಯದ ಡಿಜಿ-ಐಜಿಪಿ ಹುದ್ದೆಯನ್ನು ಅಧಿಕೃತವಾಗಿ ವಹಿಸಿಕೊಳ್ಳಲಿದ್ದು ಅವರ ಸೇವಾವಧಿಯು ಇನ್ನೂ ಎರಡು ವರ್ಷಗಳ ಕಾಲ ಇರಲಿದೆ.
ಬಿಹಾರ ಮೂಲದ ಡಾ. ಅಲೋಕ್ ಮೋಹನ್ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರು 1987ನೇ ಬ್ಯಾಚ್ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, 36 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿದ್ದಾರೆ. ಅಗ್ನಿಶಾಮಕ ದಳ, ತುರ್ತು ಸೇವೆಗಳ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಾರಾಗೃಹ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಈಗ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. 2025ರ ಏಪ್ರಿಲ್ನಲ್ಲಿ ನಿವೃತ್ತರಾಗಲಿದ್ದಾರೆ.