ಹೊಸದಿಗಂತ ಡಿಜಿಟಲ್ ಡೆಸ್ಕ್:
PSLV-C60 POEM-4 ನಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದ ಅಲಸಂದೆ ಮೊಳಕೆಯೊಡೆದಿದೆ. ಬಾಹ್ಯಾಕಾಶದಲ್ಲಿ ಅಲಸಂದೆಯ ಕಾಳುಗಳು ಚಿಗುರಿದ್ದು, ಎಲೆಗಳು ಮೂಡಿವೆ.
ಬಾಹ್ಯಾಕಾಶ ಕೃಷಿಗಾರಿಕೆಯಲ್ಲಿ ನಮ್ಮ ಹೆಮ್ಮೆಯ ಇಸ್ರೋ ಹೊಸ ಇತಿಹಾಸವನ್ನೇ ಬರೆದಿದೆ. ಪಿಎಸ್ಎಲ್ವಿ-ಸಿ60 ಮಿಷಿನ್ನಲ್ಲಿ ಅಲಸಂದೆ ಬೀಜಗಳು ಮೊಳಕೆಯೊಡೆದಿರುವ ವಿಡಿಯೋವನ್ನು ಇಸ್ರೋ ಈಗ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಜನವರಿ 4, 2025ರಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ, ಬಾಹ್ಯಾಕಾಶದಲ್ಲಿ ನಡೆಸಿರುವ ತನ್ನ ಬಾಹ್ಯಾಕಾಶ ಕೃಷಿಗಾರಿಕೆಯಲ್ಲಿ ಯಶಸ್ವಿಯಾದ ಬಗ್ಗೆ ಹೇಳಿಕೊಂಡಿತ್ತು. ಕೇವಲ ನಾಲ್ಕು ದಿನಗಳಲ್ಲಿ ಮೈಕ್ರೊಗ್ರಾವಿಟಿ ಕಂಡಿಷನ್ನಲ್ಲಿ ಎಂಟು ಅಲಸಂದೆ ಬೀಜಗಳು ಮೊಳಕೆಯೊಡೆದ ಬಗ್ಗೆ ಹೇಳಿಕೊಂಡಿತ್ತು. ಅವುಗಳ ಫೋಟೋಗಳನ್ನು ಹಂಚಿಕೊಂಡಿತ್ತು . ಇಸ್ರೋದಿಂದ ಕಳೆದ ತಿಂಗಳು ಪಿಒಇಎಂ-4 ರಾಕೆಟ್ ಉಡಾವಣೆಗೊಂಡಿತ್ತು.
ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಅಭಿವೃದ್ಧಿಪಡಿಸಿದ ಕಕ್ಷೀಯ ಸಸ್ಯ ಅಧ್ಯಯನಗಳ ಕಾಂಪ್ಯಾಕ್ಟ್ ಸಂಶೋಧನಾ ಮಾಡ್ಯೂಲ್ (CROPS), ಬಾಹ್ಯಾಕಾಶದ ಮೈಕ್ರೋಗ್ರಾವಿಟಿ ಪರಿಸರದಲ್ಲಿ ಸಸ್ಯ ಜೀವನವನ್ನು ಬೆಳೆಸಲು ಮತ್ತು ಉಳಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಸ್ವಯಂಚಾಲಿತ ವೇದಿಕೆಯಾಗಿದೆ.
ರಾಕೆಟ್ನಿಂದ ಹಲವು ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳಲಾಗಿತ್ತು. ಮುಚ್ಚಿಟ್ಟ ಪೆಟ್ಟಿಗೆ ಪರಿಸರದಲ್ಲಿ ಎಂಟು ಅಲಸಂದೆ ಕಾಳುಗಳನ್ನು ಮೊಳಕೆಯೊಡೆಸಿ ಎಲೆ ಬರುವ ಹಂತದವರೆಗೆ ಸಸಿ ಬೆಳೆಸುವ ಇಸ್ರೋ ಪ್ರಯೋಗ ಯಶಸ್ವಿಯಾಗಿತ್ತು. ಬಾಹ್ಯಾಕಾಶ ಆಧಾರಿತ ಸಸ್ಯ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಇಸ್ರೋ ಹೇಳಿದ್ದು. ಈಗ ಅಲಸಂದೆ ಬೀಜಗಳು ಮೊಳಕೆಯೊಡೆದು ಎಲೆ ಬಿಡುವ ಹಂತದವರೆಗಿನ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದೆ.