ಹೊಸದಿಗಂತ ವರದಿ, ಮಂಗಳೂರು:
- ಸುರೇಶ್ ಡಿ. ಪಳ್ಳಿ
ಆಳ್ವಾಸ್ ಅಂಗಣದಲ್ಲೀಗ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಸಂಭ್ರಮ ಮೇಳೈಸಿದೆ. ದೇಶವೇ ಬೆರಗು ಗಣ್ಣಿನಿಂದ ನೋಡುವಂತೆ ಕಾರ್ಯಕ್ರಮಗಳ ಆಯೋಜನೆ ಮಾಡಿರುವ ವಿರಾಸತ್ ರೂವಾರಿ ಡಾ.ಎಂ.ಮೋಹನ ಆಳ್ವರ ಅವಿರತ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಎಲ್ಲೂ ಲೋಪವಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದ್ದು, ಸಂಘಟಕರ ಬದ್ಧತೆಗೆ ಸಾಕ್ಷಿಯಾಗಿದೆ. ಬರುವ ಮಂದಿ ವ್ಹಾವ್! ಎಂದು ಹುಬ್ಬೇರಿಸುವಂತೆ ಮಾಡುವ ಇಲ್ಲಿನ ಕಾರ್ಯಕ್ರಮಗಳು ಮಾದರಿ ಎನಿಸಿವೆ.
ವಿದ್ಯಾಗಿರಿಯ ಕ್ಯಾಂಪಸ್ ಪ್ರವೇಶಿಸುತ್ತಿದ್ದಂತೆ ಸಾಂಸ್ಕೃತಿಕ ಲೋಕಕ್ಕೆ ಕಾಲಿಟ್ಟಂತೆ ಭಾಸವಾಗುತ್ತದೆ. ಆಳ್ವಾಸ್‌ನ 150 ಎಕರೆ ಪ್ರದೇಶದಲ್ಲಿ ಸಾಂಸ್ಕೃತಿಕ ಉತ್ಸವದ ಕಂಪು ಹರಡಿದ್ದು, ನಿತ್ಯ ಬರುವ ಸಾವಿರಾರು ಮಂದಿಯನ್ನು ಅದ್ಭುತ ಲೋಕಕ್ಕೆ ಕೊಂಡೊಯುತ್ತಿದೆ. ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಕಣ್ಮನ ಸೆಳೆಯುತ್ತದೆ.
ನಿತ್ಯ ಸಂಗೀತ ರಸದೌತಣವಿಲ್ಲಿ
ದಿನವ ಬೆಳಗಿದ ದಿನಕರ ಮರೆಯಾಗುತ್ತಿದ್ದಂತೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲೊಂದು ಸಂಗೀತ ಲೋಕ ಸೃಷ್ಟಿಯಾಗಿಬಿಡುತ್ತಿದೆ. ಸಂಗೀತಪ್ರಿಯರ ಮನಸೂರೆಗೊಳ್ಳುವ ಸಂಗೀತ ಕಾರ್ಯಕ್ರಮಗಳು ಇಲ್ಲಿ ಸಂಗೀತ ರಸದೌತಣವನ್ನೇ ಉಣ ಬಡಿಸುತ್ತಿವೆ. ಈ ಆಪ್ಯಾಯಮಾನವಾದ ಸಂಗೀತ ಗಾಯನ ಅಲ್ಲಿ ಸೇರುವ ಮಂದಿಯನ್ನು ಮಂತ್ರಮುಗ್ಧಗೊಳಿಸಿಬಿಡುತ್ತದೆ. ಕತ್ತಲು ಕವಿಯುತ್ತಿದ್ದಂತೆ ಅಲ್ಲೊಂದು ಸಂಗೀತದ ಮಾಂತ್ರಿಕ ಲೋಕವೇ ಸೃಷ್ಟಿಯಾಗಿಬಿಟ್ಟಿರುತ್ತದೆ. ಇದನ್ನು ಆಸ್ವಾದಿಸುವ ಮಂದಿ ಮೋಹನ ಆಳ್ವರ ಬಗ್ಗೆ ಒಂದೆರಡು ಮೆಚ್ಚು ನುಡಿಯನ್ನು ಆಡದೆ ತೆರಳುವುದಿಲ್ಲ.
ಮೂರು ದಶಕಗಳ ಹಿಂದೆ ಬೆಳಗಿದ ಸಾಂಸ್ಕೃತಿಕ ಬೆಳಕು ಇಂದು ಜನಮಾನಸದಲ್ಲಿ ಬೆಸೆದುಕೊಂಡಿದ್ದು, 30 ನೇ ವರ್ಷದ ‘ಆಳ್ವಾಸ್ ವಿರಾಸತ್’ ಅದ್ಧೂರಿಯಾಗಿ ನಡೆಯುತ್ತಿದೆ. ಈ ವಿರಾಸತ್‌ನಲ್ಲಿ ಭಾಗಿಯಾಗುವವರ ಸಂಖ್ಯೆ ನಿತ್ಯವೂ ಹೆಚ್ಚುತ್ತಲೇ ಇದೆ.
ಝಗಮಗಿಸುವ ಆಳ್ವಾಸ್ ಲೋಕ
ಆಳ್ವಾಸ್ ಆವರಣದ ತುಂಬೆಲ್ಲಾ ಬಣ್ಣ ಬಣ್ಣದ ಮಿಂಚುಳ್ಳಿ ಬಳ್ಳಿಗಳು…ವಿದ್ಯುದ್ದೀಪಗಳ ಸರಮಾಲೆ ಆಳ್ವಾಸ್ ಕ್ಯಾಂಪಸ್‌ನ ಕಳೆ ಹೆಚ್ಚಿಸಿದೆ. ರಂಗು ರಂಗಿನ ಬೆಳಕು ರಾತ್ರಿಯನ್ನು ಮತ್ತಷ್ಟು ಶೋಭಾಯಮಾನವಾಗಿಸುತ್ತಿದೆ. ಇಲ್ಲೆವನ್ನು ಕಣ್ತುಂಬಿಸಿಕೊಳ್ಳುವುದರಲ್ಲೇ ಮಹದಾನಂದ ನೀಡುತ್ತದೆ ಎಂದು ಹರ್ಷದಿಂದ ನುಡಿಯುತ್ತಾರೆ ಅಲ್ಲಿ ಸೇರಿರುವ ಮಂದಿ.
ಹೂ ಹಣ್ಣುಗಳ ಸಿಂಗಾರ, ಆಕರ್ಷಕ ಬೆಳಕಿನಲ್ಲಿ ಶೋಭಿಸುವ ಗೂಡು ದೀಪಗಳು, ಕಲಾಕೃತಿಯ ಮೆರುಗು ಸೇರಿದಂತೆ ಅನನ್ಯತೆ ಹಾಗೂ ಅಚ್ಚರಿಯನ್ನು ಆಳ್ವಾಸ್ ವಿರಾಸತ್ ತೆರೆದಿಟ್ಟಿದೆ.
ಗಮನಸೆಳೆಯುತ್ತಿವೆ ಮೇಳಗಳು
ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದರೆ, ಸಮೀಪದ ಕೃಷಿ ಸಿರಿ, ನೀಟ್ ಕಟ್ಟಡ, ಅರಮನೆ ಮೈದಾನ ಸೇರಿದಂತೆ ಸುತ್ತಲ ಆವರಣದಲ್ಲಿ ಕೃಷಿ ಮೇಳ, ಆಹಾರ ಮೇಳ, ಫಲ ಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯ ವಸ್ತು ಪ್ರದರ್ಶ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಬರುವ ಮಂದಿಯನ್ನು ತಮ್ಮತ್ತ ಸೆಳೆಯುತ್ತಿವೆ.
ಗುತ್ತಿನ ಮನೆಯ ಪರಿಕಲ್ಪನೆಯಲ್ಲಿ ಕೃಷಿ ಸಿರಿ
ತುಳುನಾಡಿನ ಗುತ್ತಿನ ಮನೆಯ ಪರಿಕಲ್ಪನೆಯಲ್ಲಿ ಕೃಷಿಸಿರಿ ಮೇಳಗಳ ಆವರಣವನ್ನು ಸಜ್ಜುಗೊಳಿಸಲಾಗಿದೆ. 650ಕ್ಕೂ ಅಕ ಮಳಿಗೆಗಳು ಇಲ್ಲಿದ್ದು, ಕ್ಯಾಂಪಸ್ ಗೊಂದು ಹೊಸ ಲುಕ್ ಬಂದಿದೆ. ಆಹಾರ ಮೇಳದಲ್ಲಿ 150ಕ್ಕೂ ಅಧಿಕ ಮಳಿಗೆಗಳಲ್ಲಿ ಪಾರಂಪರಿಕದಿಂದ ಹಿಡಿದು ಫಾಸ್ಟ್‌ಫುಡ್ ವರೆಗಿನ ಎಲ್ಲಾ ಬಗೆಯ ಖಾದ್ಯಗಳು ಇವೆ.
ಪುಷ್ಪ ಮೇಳದೊಳಮ್ಮೆ ಸುತ್ತಿ ಬನ್ನಿ…
ನೀವು ಆಳ್ವಾಸ್ ವಿರಾಸತ್‌ಗೆ ತೆರಳಿದರೆ ಖಂಡಿತಾ ಅಲ್ಲಿನ ಫುಷ್ಪ ಮೇಳಕ್ಕೊಮ್ಮೆ ಹೋಗಲೇಬೇಕು. ಕಂಪ ಸೂಸುವ ಬಗೆ ಬಗೆಯ ಹೂವುಗಳಿಲ್ಲಿ ಅಲಂಕಾರಗೊಂಡು ಕಲಾಕೃತಿಗಳ ಮೆರುಗು ಹೆಚ್ಚಿಸಿವೆ. ಪುಷ್ಪಗಳಿಂದಲೇ ರಚನೆಗೊಂಡ ಆನೆ, ಕುದುರೆ, ಜಿರಾಫೆ, ನವಿಲುಗಳು ಜೀವಂತಿಕೆ ಪಡೆದುಕೊಂಡಿವೆ.
ಪೆಟುನಿಯಾ, ಸಾಲ್ವಿಯಾ, ಆಗ್ಲೋನಿನ, ಫಿಲಿಡೊಡ್ರನ್, ಟೊರ್ನಿಯ, ಕಲೆನಚೊ, ಸದಾ ಪುಷ್ಪ, ಸೇವಂತಿಗೆ, ಜೀನ್ಯ, ಗೌರಿ, ಡಾಲಿ, ಲಿಲ್ಲಿ, ಸಿಲ್ವರ್, ಡಸ್ಟ್ ಲವೆಂಡಾರ್, ಅನೆಸೊಪ್ಪು, ಅಂತೋರಿಯಂ, ಮಲ್ಲಿಗೆ, ಸಲ್ವಿಯ, ಸ್ಲೆಂಡನ್ಸ್, ಸೆಲೋಶಿಯಾ, ಚೈನೀಸ್ ಫ್ರಿಂಜ್, ವೀಪಿಂಗ್ ಫಿಗ್ ಹೀಗೆ ಬಗೆ ಬಗೆಯ ಹೂವುಗಳಿಂದಾಗಿ ಅಲ್ಲೊಂದು ನಂದನವನ ಸೃಷ್ಟಿಯಾಗಿದೆ.