ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಮಹಿಳಾ ಆಸ್ಪತ್ರೆಯ ನವಜಾತ ಶಿಶುಗಳ ನಿಗಾ ಘಟಕದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ನವಜಾತ ಶಿಶುಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಾರ್ವಜನಿಕ ಆರೋಗ್ಯ ಇಲಾಖೆಯು ಕಠಿಣ ಕ್ರಮ ಜರುಗಿಸಿದೆ. ಉನ್ನತ ಮಟ್ಟದ ತನಿಖಾ ಸಮಿತಿಯ ವರದಿ ಆಧರಿಸಿ ಕರ್ತವ್ಯ ಲೋಪ ಎಸಗಿದ ಐವರು ಹಿರಿಯ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಇದರೊಂದಿಗೆ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿದ ಇಬ್ಬರು ಖಾಸಗಿ ಗುತ್ತಿಗೆ ಸಂಸ್ಥೆಗಳನ್ನು ಬ್ಲ್ಯಾಕ್ ಲೀಸ್ಟ್‌ಗೆ ಸೇರಿಸಲು ಆದೇಶಿಸಲಾಗಿದೆ.
ಆಡಳಿತ ಮಂಡಳಿಯ ನಿರ್ಲಕ್ಷ್ಯ ಬಯಲು
ಆರೋಗ್ಯ ಆಯುಕ್ತರ ನೇತೃತ್ವದ ಉನ್ನತ ಮಟ್ಟದ ತನಿಖಾ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯ ಲೋಪದೋಷಗಳು ಬೆಳಕಿಗೆ ಬಂದಿವೆ. ವೆಂಟಿಲೇಟರ್‌ಗಳು ಸೇರಿದಂತೆ ಜೀವ ರಕ್ಷಕ ಉಪಕರಣಗಳ ನಿಯಮಿತ ದುರಸ್ತಿ ಮತ್ತು ನಿರ್ವಹಣೆಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಲಾಗಿತ್ತು. ದುರಂತ ಸಂಭವಿಸಿದ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದ ಅಗ್ನಿಶಾಮಕ ಅಲಾರಾಂ ಹಾಗೂ ನೀರಿನ ಸ್ಪ್ರಿಂಕ್ಲರ್ ವ್ಯವಸ್ಥೆಗಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದವು. ಅಷ್ಟೇ ಅಲ್ಲದೆ, ತುರ್ತು ಸಂದರ್ಭದಲ್ಲಿ ಬಳಸಬೇಕಾದ ಫೈರ್ ಪಂಪ್ ಹೌಸ್‌ಗೆ ಬೀಗ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.
1979ರ ನಿಯಮದಡಿ ಶಿಸ್ತು ಕ್ರಮ
ಈ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರ್ಕಾರವು, ಜವಾಬ್ದಾರಿ ಹೊತ್ತಿದ್ದ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಮಹಾರಾಷ್ಟ್ರ ನಾಗರಿಕ ಸೇವೆಗಳ ನಿಯಮಗಳು 1979ರ ನಿಯಮ 8ರ ಅಡಿಯಲ್ಲಿ ಕಠಿಣ ಶಿಸ್ತು ಕ್ರಮ ಜರುಗಿಸಲು ಆದೇಶಿಸಿದೆ. ಇದರೊಂದಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಆಡಳಿತಾತ್ಮಕ ಕ್ರಮಕ್ಕೆ ಜರುಗಿಸಲಾಗಿದೆ.
ಇದನ್ನೂ ಓದಿ:
ಅವಘಡ ನಡೆದಿದ್ದು ಹೇಗೆ?
ಆಗಸ್ಟ್ 24ರಂದು ಮುಂಜಾನೆ ಸುಮಾರು 3.15ರ ಸುಮಾರಿಗೆ ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ಎನ್‌ಐಸಿಯು ಘಟಕದಲ್ಲಿ ವೆಂಟಿಲೇಟರ್ ಶಾರ್ಟ್ ಸರ್ಕ್ಯೂಟ್ ಆಗಿ ಈ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಹೊಗೆಯಿಂದ ಮಕ್ಕಳ ಶ್ವಾಸಕೋಶಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಒಟ್ಟು 36 ನವಜಾತ ಶಿಶುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ಆದಾಗ್ಯೂ, ತೀವ್ರ ನಿಗಾ ಘಟಕದಲ್ಲಿದ್ದ ಮೂವರು ನವಜಾತ ಶಿಶುಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದವು. ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಆರೋಗ್ಯ ಸಚಿವ ಪ್ರಕಾಶ್ ಅಬಿತ್ಕರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.



