Wednesday, August 10, 2022

Latest Posts

2 ವರ್ಷಗಳ ಬಳಿಕ ಅಮರನಾಥ ಯಾತ್ರೆ: ಆಧುನಿಕ ತಂತ್ರಜ್ಞಾನದೊಂದಿಗೆ ಬಿಗಿ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಂದೂಗಳ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದಾದ ಅಮರನಾಥ ಯಾತ್ರೆ ಎರಡು ವರ್ಷಗಳ ಬಳಿಕ ಇಂದು (ಗುರುವಾರ) ಆರಂಭವಾಗಿದೆ. ಅಮರನಾಥ ಯಾತ್ರಿಕರ ಮೊದಲ ಬ್ಯಾಚ್ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿರುವ ನುನ್ವಾನ್ ಬೇಸ್ ಕ್ಯಾಂಪ್‌ನಿಂದ ಹೊರಟಿದೆ. ಜಿಲ್ಲಾಧಿಕಾರಿ ಪಿಯೂಷ್ ಸಿಂಗ್ಲಾ ಧ್ವಜಾರೋಹಣ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಅಧಿಕಾರಿಗಳು ಭಕ್ತರಿಗೆ ಅದ್ಧೂರಿ ಸ್ವಾಗತ ಕೋರಿದರು. ಪಹಲ್ಗಾಮ್ ಹೊರತುಪಡಿಸಿ, ಅಮರನಾಥವನ್ನು ತಲುಪಲು ಬಾಲ್ಟಾಲ್ ಎಂಬ ಇನ್ನೊಂದು ಮಾರ್ಗವಿದೆ. ಈ ಬಾರಿ ಉಗ್ರರ ಬೆದರಿಕೆಯ ಗುಪ್ತಚರ ಮಾಹಿತಿ ಆಧರಿಸಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸಿಆರ್‌ಪಿಎಫ್ ಯೋಧರ ಜೊತೆಗೆ ಸ್ಥಳೀಯ ಪೊಲೀಸರೂ ಭದ್ರತೆ ಒದಗಿಸುತ್ತಿದ್ದಾರೆ. ಸಂಪೂರ್ಣ ಭದ್ರತೆಯ ನಡುವೆ ಯಾತ್ರೆ ಶಾಂತಿಯುತವಾಗಿ ಸಾಗಲು ವ್ಯವಸ್ಥೆ ಮಾಡಲಾಗಿದೆ. ಡ್ರೋನ್‌ಗಳ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಭದ್ರತೆಗಾಗಿ ಬಳಸಲಾಗುತ್ತಿದೆ. ಯಾತ್ರಾರ್ಥಿಗಳಿಗೆ ಮೂರು ಹಂತದ ಭದ್ರತೆ ಏರ್ಪಡಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರವಾಸವು 43 ದಿನಗಳವರೆಗೆ ಇರಲಿದ್ದು, ಆಗಸ್ಟ್ 11ರಂದು ಯಾತ್ರೆ ಮುಕ್ತಾಯವಾಗಲಿದೆ.

ಮೊದಲ ಬ್ಯಾಚ್‌ನಲ್ಲಿ 4,890 ಯಾತ್ರಿಕರು ಅಮರನಾಥಕ್ಕೆ ತೆರಳುತ್ತಿದ್ದಾರೆ. ಈ ಪವಿತ್ರ ಸ್ಥಳವು ಸಮುದ್ರ ಮಟ್ಟದಿಂದ 3,800 ಮೀಟರ್ ಎತ್ತರದಲ್ಲಿದೆ. ಅಲ್ಲಿ ಹಿಮದಿಂದ ಮಾಡಿದ ಶಿವಲಿಂಗವನ್ನು ಭಕ್ತರು ದರ್ಶನ ಮಾಡುತ್ತಾರೆ.  ಕೊರೊನಾ ಕಾರಣದಿಂದಾಗಿ ಎರಡು ವರ್ಷಗಳಿಂದ ಯಾತ್ರೆಗೆ ಬ್ರೇಕ್‌ ಹಾಕಲಾಗಿತ್ತು. ಇದೀಗ ಹೆಚ್ಚಿನ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss