ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವಾರವಷ್ಟೇ ಆರಂಭವಾದ ಅಮರನಾಥ್ ಯಾತ್ರೆಯನ್ನು ಪ್ರತಿಕೂಲ ಹವಾಮಾನದ ಪರಿಣಾಮ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಿಂದ ಸಾಗುವ ಯಾತ್ರೆಯ ಮಾರ್ಗವನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. 43 ದಿನ ಗಳಕಾಲ ನಡೆಯುವ ಈ ಯಾತ್ರೆಯನ್ನು ಅನಂತನಾಗ್‌ನ ಪಹಲ್ಗಾಮ್‌ನಲ್ಲಿರುವ ನುನ್ವಾನ್ ಮತ್ತು ಮಧ್ಯ ಕಾಶ್ಮೀರದ ಗಂಡರ್‌ಬಾಲ್ ಜಿಲ್ಲೆಯ ಬಾಲ್ಟಾಲ್ ಶಿಬಿರಗಳ ಮೂಲಕ ನಡೆಸಲಾಗುತ್ತದೆ.
ಮಂಗಳವಾರ ಬೆಳಗ್ಗೆ ಪಹಲ್ಗಾಮ್ ಅಕ್ಷದ ನುನ್ವಾನ್ ಬೇಸ್ ಕ್ಯಾಂಪ್‌ನಲ್ಲಿ ಸುಮಾರು 3,000 ಯಾತ್ರಾರ್ಥಿಗಳನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮುವಿನಿಂದ ಪಹಲ್ಗಾಮ್ ಮಾರ್ಗಕ್ಕೆ ತೆರಳಿದ್ದ ಸುಮಾರು 4,000 ಯಾತ್ರಾರ್ಥಿಗಳ ಮತ್ತೊಂದು ಬ್ಯಾಚ್ ಅನ್ನು ರಾಂಬನ್ ಜಿಲ್ಲೆಯ ಚಂದರ್‌ಕೋಟೆಯ ಯಾತ್ರಿ ನಿವಾಸದಲ್ಲಿ ನಿಲ್ಲಿಸಲಾಗಿದೆ.
ಜಮ್ಮುವಿನಿಂದ ಬಾಲ್ಟಾಲ್ ಮಾರ್ಗಕ್ಕೆ ಹೊರಟ ಸುಮಾರು 2,000 ಯಾತ್ರಾರ್ಥಿಗಳಿಗೆ ಮುಂದುವರಿಯಲು ಅವಕಾಶ ನೀಡಲಾಯಿತು.
ಜೂನ್ 30 ರಿಂದ, 72,000 ಕ್ಕೂ ಹೆಚ್ಚು ಯಾತ್ರಿಕರು ಅಮರನಾಥ ಗುಹೆಯಲ್ಲಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ, ಇದು ರಕ್ಷಾ ಬಂಧನದ ಸಂದರ್ಭದಲ್ಲಿ ಅಂದರೆ ಈ ವರ್ಷ ಆಗಸ್ಟ್ 11 ರಂದು ಕೊನೆಗೊಳ್ಳಲಿದೆ.