ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಪ್ರತಿ ಕಚೇರಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳನ್ನು ತೆಗೆದುಹಾಕಿದ್ದಾರೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಅತಿಶಿ ಅವರು ಆರೋಪಿಸಿದ್ದಾರೆ.
ಅತಿಶಿ ಸೋಮವಾರ ತಮ್ಮ ಕೊಠಡಿಯಲ್ಲಿ ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಭೇಟಿಯಾದರು. ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ, ಪ್ರಸ್ತುತ ಅಧಿಕಾರಿಗಳು ಪ್ರತಿ ಕಚೇರಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳನ್ನು ತೆಗೆದುಹಾಕಿದ್ದಾರೆ ಎಂದು ಆರೋಪಿಸಿದರು.
ಭಾರತೀಯ ಜನತಾ ಪಕ್ಷದ ದಲಿತ ವಿರೋಧಿ ಮನಸ್ಥಿತಿ ಎಲ್ಲರಿಗೂ ತಿಳಿದಿದೆ. ಇಂದು, ಅದರ ದಲಿತ ವಿರೋಧಿ ಮನಸ್ಥಿತಿಗೆ ಪುರಾವೆ ನೀಡಲಾಗಿದೆ. ಅರವಿಂದ್ ಕೇಜ್ರಿವಾಲ್ ದೆಹಲಿ ಸರ್ಕಾರದ ಪ್ರತಿಯೊಂದು ಕಚೇರಿಯಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳನ್ನು ಹಾಕಿದ್ದರು ಎಂದು ಅತಿಶಿ ಹೇಳಿದರು.
ಆದ್ರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಈ ಎರಡೂ ಫೋಟೋಗಳನ್ನು ಮುಖ್ಯಮಂತ್ರಿ ಕಚೇರಿಯಿಂದ ತೆಗೆದುಹಾಕಿದೆ. ಇದು ಬಿಜೆಪಿ ದಲಿತ ವಿರೋಧಿ, ಸಿಖ್ ವಿರೋಧಿ ಪಕ್ಷ ಎಂಬುದನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಮುಖ್ಯಮಂತ್ರಿ ಕಚೇರಿಯಿಂದ ಬಿ.ಆರ್. ಅಂಬೇಡ್ಕರ್ ಅವರ ಫೋಟೋ ತೆಗೆದು ಹಾಕುವ ಮೂಲಕ ಬಿಜೆಪಿ ನೇತೃತ್ವದ ದೆಹಲಿ ಸರ್ಕಾರ ಲಕ್ಷಾಂತರ ಅನುಯಾಯಿಗಳಿಗೆ ನೋವುಂಟು ಮಾಡಿದೆ ಎಂದು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ದೆಹಲಿಯ ಹೊಸ ಬಿಜೆಪಿ ಸರ್ಕಾರ ಬಾಬಾಸಾಹೇಬ್ ಅವರ ಫೋಟೋ ತೆಗೆದು ಪ್ರಧಾನಿ ಮೋದಿ ಅವರ ಫೋಟೋ ಹಾಕಿದೆ. ಇದು ಸರಿಯಲ್ಲ. ಇದು ಬಾಬಾಸಾಹೇಬ್ ಅವರ ಲಕ್ಷಾಂತರ ಅನುಯಾಯಿಗಳಿಗೆ ನೋವುಂಟು ಮಾಡಿದೆ ಎಂದು ಕೇಜ್ರಿವಾಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
ತಿರುಗೇಟು ಕೊಟ್ಟ ಬಿಜೆಪಿ
ಈ ಮಧ್ಯೆ, ಮುಖ್ಯಮಂತ್ರಿ ಕಚೇರಿಯ ಫೋಟೋವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ದೆಹಲಿ ಬಿಜೆಪಿ, ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಚಿತ್ರಗಳು ಇನ್ನೂ ಅಲ್ಲೇ ಇವೆ. ಆದರೆ ವಿರುದ್ಧ ಗೋಡೆಗಳ ಮೇಲೆ ಹಾಕಲಾಗಿದೆ.ದೆಹಲಿ ಮುಖ್ಯಮಂತ್ರಿ ಮತ್ತು ಎಲ್ಲಾ ಸಚಿವರ ಕೊಠಡಿಗಳಲ್ಲಿ ಮಹಾತ್ಮ ಗಾಂಧಿ, ಬಿ.ಆರ್. ಅಂಬೇಡ್ಕರ್, ಭಗತ್ ಸಿಂಗ್, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಾವ ಚಿತ್ರಗಳಿವೆ ಎಂದು ಬಿಜೆಪಿ ಹೇಳಿದೆ.
ಆದಾಗ್ಯೂ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಚಿತ್ರಗಳನ್ನು ಸಿಎಂ ಕಚೇರಿಯಿಂದ ತೆಗೆದುಹಾಕಲಾಗಿದೆ ಎಂಬ ವಿರೋಧ ಪಕ್ಷದ ನಾಯಕಿ ಅತಿಶಿ ಅವರ ಆರೋಪವನ್ನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ತಳ್ಳಿಹಾಕಿದ್ದು, ಅವರು ಸುಳ್ಳು ಹೇಳುತ್ತಿದ್ದಾರೆ. ಇದು ಭ್ರಷ್ಟಾಚಾರದಿಂದ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಎಂದು ತಿರುಗೇಟು ನೀಡಿದ್ದಾರೆ.