ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಎಂಕೆ ಸಚಿವರ ಬೆಂಗಾವಲು ಪಡೆಗೆ ದಾರಿ ಮಾಡಿಕೊಡಲು ಇತರ ವಾಹನಗಳಂತೇ ಆಂಬ್ಯುಲೆನ್ಸ್ ಅನ್ನೂ ಕೂಡ ತಡೆ ಹಿಡಿದ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದಿದೆ. ಡಿಎಂಕೆ ಸಚಿವ ಅನ್ಬಿಲ್ ಮಹೇಶ್ ಅವರು ಕೊಲ್ಲಿಡಂನಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲು 15 ಕ್ಕೂ ಹೆಚ್ಚು ಕಾರುಗಳೊಂದಿಗೆ ಸಾಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯದಲ್ಲಿ ಅವರಿಗೆ ಸರಾಗವಾಗಿ ದಾರಿ ಮಾಡಿಕೊಡಲು ಐಸಿಯು ಆಂಬ್ಯುಲನ್ಸ್ ಅನ್ನು ತಡೆ ಹಿಡಿಯಲಾಗಿದೆ.
ಅಧಿಕಾರಿಗಳು ಪೋಲೀಸರು ಸ್ಥಳದಲ್ಲೇ ಇದ್ದರೂ ಕೂಡ ಯಾರೊಬ್ಬರೂ ಆಂಬ್ಯಲೆನ್ಸ್ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ. ಸಚಿವರೊಂದಿಗೆ ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಇದ್ದರು. ಮೊದಲ ಬ್ಯಾಚ್ ವಾಹನಗಳು ತೆರಳಿದ ನಂತರ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲಾಯಿತು.
ಈ ಕುರಿತು ವೀಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.