ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ರಾಷ್ಟ್ರಧ್ವಜ ಕುರಿತು ಜಾಗೃತಿ ಮೂಡಿಸಬೇಕು : ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ

ಹೊಸದಿಗಂತ ವರದಿ ಚಿತ್ರದುರ್ಗ:
ಭಾರತ ಸೇವಾದಳ ರಾಷ್ಟ್ರಧ್ವಜದ ಪರಿಕಲ್ಪನೆಯನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡುತ್ತಿರುವುದು ವಿಶೇಷ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಜಿಲ್ಲಾಡಳಿತ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ೭೫ ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಮಾರಂಭದ ಅಂಗವಾಗಿ ಹರ್‌ಘರ್ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಹರ್‌ಘರ್ ತಿರಂಗಾ ಯಾತ್ರೆಯು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಯಾತ್ರೆಯಾಗಿದೆ. ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ರಾಷ್ಟ್ರಧ್ವಜದ ಕುರಿತು ಜಾಗೃತಿ ಮೂಡಿಸಲಾಗುವುದು. ದೇಶದ ೭೫ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿರುವ ತಿರಂಗಾ ಯಾತ್ರೆಯಿಂದಾಗಿ ಜನರಲ್ಲಿ ರಾಷ್ಟ್ರಾಭಿಮಾನ ಬೆಳೆಯುವುದರೊಂದಿಗೆ ದೇಶಪ್ರೇಮ ಹೆಚ್ಚುತ್ತದೆ ಎಂದು ತಿಳಿಸಿದರು.

ನೂತನ ಡಿ.ವೈ.ಎಸ್.ಪಿ. ಅನಿಲ್‌ಕುಮಾರ್ ಮಾತನಾಡಿ, ಭಾರತ ಸೇವಾದಳದ ವತಿಯಿಂದ ಹಮ್ಮಿಕೊಳ್ಳಲಾಗಿರುವ ೭೫ನೇ ಅಮೃತ ಮಹೋತ್ಸವದ ತಿರಂಗಾ ಯಾತ್ರೆಯು ವಿಶೇಷವಾಗಿದ್ದು, ಈ ಯಾತ್ರೆಗೆ ಸರ್ಕಾರ ಮತ್ತು ಜನರ ಸಹಕಾರ ಅಗತ್ಯವಾಗಿದೆ. ಶಾಲಾ ಮಕ್ಕಳಲ್ಲಿ ತಿರಂಗಾ ಯಾತ್ರೆ ಕುರಿತು ಜಾಗೃತಿ ಮೂಡಿಸುತ್ತಿರುವುದು ರಾಷ್ಟ್ರಧ್ವಜದ ಬಗ್ಗೆ ಮಹತ್ವ ಹೆಚ್ಚುತ್ತದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್‌ಕುಮಾರ್, ಕಾರ್ಯಾಧ್ಯಕ್ಷ ಎಸ್.ಶಿವಣ್ಣ, ಸದಸ್ಯರುಗಳಾದ ದಗ್ಗೆ ಶಿವಪ್ರಕಾಶ್, ಲಕ್ಷ್ಮಿಪತಿ, ಸೈಯದ್ ಸಾದತ್ ಹಾಜರಿದ್ದು, ತಿರಂಗಾಯಾತ್ರೆ ಜೊತೆಗೂಡಿದರು.

ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಾದ ನೀಲಕಂಠಾಚಾರ್, ಭಾರತ ಸೇವಾದಳದ ಜಿಲ್ಲಾ ಸಂಘಟಕ ಬಸವಣ್ಣಪ್ಪ ಪತ್ರಿ, ತಾಲ್ಲೂಕು ಅಧ್ಯಕ್ಷ ಕಾಟಮಲ್ಲಪ್ಪ ಇನ್ನು ಮುಂತಾದವರು ತಿರಂಗಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಆರಂಭಗೊಂಡ ವಿದ್ಯಾರ್ಥಿಗಳ ಪ್ರಭಾತ್‌ಭೇರಿ (ತಿರಂಗಾ ಯಾತ್ರೆ) ಯಲ್ಲಿ ಮದಕರಿಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ವಿದ್ಯಾವಿಕಾಸ, ಸಂತಜೋಸೆಫ್ ಕಾನ್ವೆಂಟ್, ಜ್ಞಾನಭಾರತಿ, ಸಂಪಿಗೆ ಸಿದ್ದೇಶ್ವರ, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ, ಶಿಕ್ಷಕಿಯರು ಭಾಗವಹಿಸುವ ಮೂಲಕ ಯಾತ್ರೆಯನ್ನು ಯಶಸ್ವಿಗೊಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!