ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ನೋಟರಿಗಳ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸುವ ನೋಟರಿಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025 ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು.
ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವಂತೆ ನೋಟರಿಗಳ ನೇಮಕಾತಿಗಳಲ್ಲಿ ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳು, ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಜಿದಾರರಿಗೆ ಮೀಸಲಾತಿಗಾಗಿ ಹಾಗೂ ಮಹಿಳೆಯರಿಗೆ ಮತ್ತು ದೈಹಿಕ ವಿಕಲಚೇತನ ವ್ಯಕ್ತಿಗಳಿಗೆ ಸಮತಲ ಮೀಸಲಾತಿಗಾಗಿ ಉಪಬಂಧಗಳನ್ನು ಕಲ್ಪಿಸಲು, ನೋಟರಿಗಳ ಅಧಿನಿಯಮ, 1952 (1952ರ ಕೇಂದ್ರ ಅಧಿನಿಯಮ 53)ನ್ನು ತಿದ್ದುಪಡಿ ವಿಧೇಯಕ ಇದಾಗಿದೆ.
ನೋಟರಿಗಳನ್ನು ನೇಮಕ ಮಾಡುವಾಗ ರಾಜ್ಯ ಸರ್ಕಾರ, ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳು, ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಜಿದಾರರಿಗೆ ಮೀಸಲಾತಿಯನ್ನು ಹಾಗೂ ಮಹಿಳೆಯರಿಗೆ ಮತ್ತು ದೈಹಿಕ ವಿಕಲಚೇತನ ವ್ಯಕ್ತಿಗಳಿಗೆ ಸಮತಲ ಮೀಸಲಾತಿಯನ್ನು ರಾಜ್ಯ ಸರ್ಕಾರ ಕಾಲಕಾಲಕ್ಕೆ ಒದಗಿಸಬಹುದಾಗಿದೆ. ಒಂದು ವೇಳೆ ಪ್ರವರ್ಗಗಳಿಂದ ಅಭ್ಯರ್ಥಿಗಳು ಲಭ್ಯವಿರದಿದ್ದಲ್ಲಿ ಆಗ ಅಂಥ ಹುದ್ದೆಗಳನ್ನು ಸಾಮಾನ್ಯ ಪ್ರವರ್ಗಕ್ಕೆ ಸೇರಿದ ವ್ಯಕ್ತಿಗಳಿಂದ ತುಂಬಬಹುದಾಗಿದೆ.