September 6, 2026
Sunday, September 6, 2026
spot_img

ಮೋದಿ ನಾಯಕತ್ವಕ್ಕೆ ಅಮೆರಿಕ ಫಿದಾ: ಶ್ವೇತಭವನದಿಂದ ಪ್ರಧಾನಿಗೆ ಸಿಕ್ತು ಜಾಗತಿಕ ಶ್ಲಾಘನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತವನ್ನು ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಭಾವಶಾಲಿ ಶಕ್ತಿಯಾಗಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಧೀಮಂತ ನಾಯಕತ್ವವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಾಪ್ತ ರಾಜತಾಂತ್ರಿಕರಾಗಿರುವ ರೂಬಿಯೊ, “ನಾವೆಲ್ಲರೂ ಪ್ರಧಾನಿ ಮೋದಿಯವರ ಅಪಾರ ಅಭಿಮಾನಿಗಳು” ಎಂದು ಶ್ವೇತಭವನದ ವಿಶೇಷ ಸಂದರ್ಶನದಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ.

ಟ್ರಂಪ್-ಮೋದಿ ಅಪೂರ್ವ ಬಾಂಧವ್ಯ

ಅಮೆರಿಕ ಅಧ್ಯಕ್ಷರು ಹಾಗೂ ಭಾರತದ ಪ್ರಧಾನಿ ನಡುವಿನ ವೈಯಕ್ತಿಕ ಸ್ನೇಹವು ಹಿಂದೆಂದಿಗಿಂತಲೂ ಗಟ್ಟಿಯಾಗಿದೆ. ಟ್ರಂಪ್ ಆಡಳಿತವು ಭಾರತವನ್ನು ತನ್ನ ಅತ್ಯಂತ ಆಪ್ತ ಹಾಗೂ ಕಾರ್ಯತಂತ್ರದ ಪಾಲುದಾರ ರಾಷ್ಟ್ರವಾಗಿ ಪರಿಗಣಿಸಿದೆ ಎಂದು ರೂಬಿಯೊ ಸ್ಪಷ್ಟಪಡಿಸಿದ್ದಾರೆ. ಮೋದಿ ನಾಯಕತ್ವದಲ್ಲಿ ಭಾರತವು ಅದ್ಭುತ ಆರ್ಥಿಕ ಪ್ರಗತಿ ಸಾಧಿಸುತ್ತಿರುವುದನ್ನು ಅವರು ಸ್ಮರಿಸಿದ್ದಾರೆ.

ಜಾಗತಿಕ ರಂಗದಲ್ಲಿ ಭಾರತ-ಯುಎಸ್ ಮೈತ್ರಿ

ಭಾರತದ ಬೆಳೆಯುತ್ತಿರುವ ಜಾಗತಿಕ ಪ್ರಭಾವವು ನವದೆಹಲಿ ಮತ್ತು ವಾಷಿಂಗ್ಟನ್ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದೆ. ಉಭಯ ದೇಶಗಳು ಜಾಗತಿಕ ಅರ್ಥಶಾಸ್ತ್ರ, ಪೂರೈಕೆ ಸರಪಳಿ, ನಿರ್ಣಾಯಕ ಖನಿಜಗಳು, ಹಸಿರು ಇಂಧನ, ಜಾಗತಿಕ ಭದ್ರತೆ ಹಾಗೂ ಸಮುದ್ರಯಾನದ ಸ್ವಾತಂತ್ರ್ಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ (ಭಾರತ) ಮತ್ತು ಅತ್ಯಂತ ಹಳೆಯ ಪ್ರಜಾಪ್ರಭುತ್ವ (ಅಮೆರಿಕ) ಒಗ್ಗೂಡಿ ಜಾಗತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿವೆ ಎಂದು ರೂಬಿಯೊ ಒತ್ತಿ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !