ಹೊಸದಿಗಂತ ವರದಿ, ಚಿತ್ರದುರ್ಗ:
ಭಾರತ ದೇಶದಲ್ಲಿ ಹುಟ್ಟಿದ ಅನೇಕ ಜನರು ಪಾಶ್ಚಿಮಾತ್ಯ ದೇಶದ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಆ ಮೂಲಕ ನಮ್ಮ ಭಾರತದ ಶ್ರೇಷ್ಠ ಸಂಸ್ಕೃತಿಯನ್ನು ನಿರ್ಲಕ್ಷಿಸುತ್ತಿದ್ದಾರೆ. ಆದರೆ ಭಾರತದ ಶ್ರೇಷ್ಠ ಸಂಸ್ಕೃತಿ ಹಾಗೂ ಭಾರತದ ಯುವಕನ ಸರಳತೆಯನ್ನು ಮೆಚ್ಚಿದ ದೂರದ ಅಮೆರಿಕದ ಕೆಲಿ ಕ್ರಿಸ್ಟಿನ್ ನೀಲ್ ಎಂಬ ಯುವತಿ ಭಾರತೀಯ ಅದರಲ್ಲೂ ಚಿತ್ರದುರ್ಗದ ಯುವಕನ್ನು ಮದುವೆಯಾಗಿದ್ದಾರೆ. ಇಲ್ಲಿನ ಸೊಸೆಯಾಗಿ, ಭಾರತದ ದೇಶದ ಸಂಸ್ಕೃತಿಯ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆಯ ನಿವಾಸಿ ಕೆಎಸ್‌ಎಪ್‌ಸಿ ನಿವೃತ್ತ ಡೆಪ್ಯೂಟಿ ಮ್ಯಾನೇಜರ್ ಪಿ.ಡಿ.ಯಲ್ಲಪ್ಪ ಹಾಗೂ ಪಾರ್ವತಮ್ಮ ಅವರ ಪುತ್ರ ಡಾ.ವೈ.ಡಿ.ಅಭಿಲಾಷ್ ಅಮೆರಿಕ ಯುವತಿಯನ್ನು ವರಿಸಿರುವ ಯುವಕ. ಈತ ಕಳೆದ ಎರಡು ವರ್ಷಗಳಿಂದ ಅಮೆರಿಕದ ಬ್ಯಾಂಕ್ ಆಫ್ ನ್ಯೂಯಾರ್ಕ್‌ನಲ್ಲಿ ಕ್ವಾಂಟಿಟೇಟಿವ್ ರಿಸರ್ಚರ್ ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಶಿಕ್ಷಣ ಮುಗಿಸಿದರು. ನಂತರ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು.
ಶಿಕ್ಷಣ ಮುಗಿದ ಕೆಲ ದಿನಗಳ ಕಾಲ ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ ಅಭಿಲಾಷ್, ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಗೆ ತೆರಳಿದರು. ಅಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಪಿಹೆಚ್‌ಡಿ ಪದವಿ ಪಡೆದರು. ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಪಕ್ಕದ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಕೆಲಿ ಕ್ರಿಸ್ಟಿನ್ ನೀಲ್ ಎಂಬ ಯುವತಿ ಪರಿಚಯವಾಯಿತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೇಮಕ್ಕೆ ತಿರುಗಲು ಹೆಚ್ಚೇನೂ ಸಮಯ ಆಗಲಿಲ್ಲ. ೨೦೧೯ರಲ್ಲಿ ಯುವಕನ ಕಡೆಯಿಂದ ಪ್ರೇಮ ನಿವೇದನೆಯಾಯಿತು. ಯುವತಿಯ ಸಮ್ಮತಿಯೂ ದೊರೆಯಿತು.
ಬಳಿಕ ಇವರಿಬ್ಬರೂ ಅಮೆರಿಕದಲ್ಲಿ ಪ್ರಣಯ ಪಕ್ಷಿಗಳಾಗಿ ವಿಹರಿಸತೊಡಗಿದರು. ಈ ಕುರಿತು ಚಿತ್ರದುರ್ಗದಲ್ಲಿನ ಪೋಷಕರಿಗೆ ಅಭಿಲಾಷ್ ವಿಷಯ ತಿಳಿಸಿದರು. ಇವರ ಪ್ರೀತಿಗೆ ಹೆತ್ತವರ ಅನುಮತಿಯೂ ದೊರೆಯಿತು. ಇದರಿಂದಾಗಿ ಈ ಯುವ ಪ್ರೇಮಿಗಳು ಅಮೆರಿಕದಿಂದ ಹಾರಿ ಚಿತ್ರದುರ್ಗಕ್ಕೂ ಬಂದರು. ಹೀಗೆ ೨೦೨೩ರ ಫೆಬ್ರವರಿ ತಿಂಗಳಲ್ಲಿ ಅಭಿಲಾಷ್ ಜೊತೆ ಇಲ್ಲಿಗೆ ಬಂದ ಯುವತಿ ಶಿವರಾತ್ರಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದರು. ಇಲ್ಲಿನ ಧಾರ್ಮಿಕ ಪದ್ಧತಿ, ಹಬ್ಬ ಆಚರಣೆಯ ವಿಧಿ ವಿಧಾನಗಳನ್ನು ಕಂಡು ಪುಳಕಿತಳಾದಳು. ಇದು ಇವರಿಬ್ಬರ ಮದುವೆಗೆ ನಾಂದಿಯಾಯಿತು.
ಹೀಗೆ ಭಾರತೀಯ ಸಂಸ್ಕೃತಿ, ಭಾರತೀಯ ಯುವಕನಿಗೆ ಮನಸೋತ ಯುವತಿ ಈಗ ದುರ್ಗದ ಸೊಸೆಯಾಗಿದ್ದಾರೆ. ಡಿ.೧೫ ರಂದು ಇಲ್ಲಿನ ಜಿ.ಜಿ.ಸಮುದಾಯ ಭವನದಲ್ಲಿ ಮದುವೆ ಕಾರ್ಯ ನಡೆಯಿತು. ಯುವತಿಯ ತಂದೆ ಕೆನೆತ್ ನೀಲ್, ತಾಯಿ ಡೋರೆನ್ ಸ್ಟ್ಯಾಂಡರ್, ಸಂಬಂಧಿಕರು, ಸ್ನೇಹಿತರು ಸೇರಿದಂತೆ ೧೫ ಜನ ದೂರದ ಅಮೆರಿಕದಿಂದ ಮದುವೆಗೆ ಆಗಮಿಸಿದ್ದರು. ಮದುವೆಯ ಬಳಿಕ ಯುವ ಜೋಡಿ ಐತಿಹಾಸಿಕ ತಾಣ ಹಂಪೆ, ಅಂಜನಾದ್ರಿ ಬೆಟ್ಟ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸುತ್ತಾಡಿದರು. ಡಿ.೧೯ ರಂದು ಅಮೇರಿಕಾಗೆ ಪ್ರಯಾಣ ಬೆಳೆಸಿದರು.
ಭಾರತೀಯರ ಜೊತೆ ಸಂಬಂಧ ಬೆಳೆಸಿರುವ ಯುವತಿ ಕನ್ನಡ ಕಲಿಯುತ್ತಿದ್ದಾರೆ. ಇಲ್ಲಿನ ಉಡುಗೆ, ತೊಡುಗೆ, ಆಚಾರ, ವಿಚಾರ, ಸಂಪ್ರದಾಯವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ನಿಧಾನವಾಗಿ ಭಾರತೀಯ ಸಂಸ್ಕೃತಿಯ ಭಾಗವಾಗುವ ಪ್ರಯತ್ನ ಮಾಡುತ್ತಿರುವ ಇವರು ಭಾರತ ನಾರಿಯಾಗುವ ಆಸೆ ಹೊಂದಿದ್ದಾರೆ. ಪತಿಯ ಮನೆಯವರ ಜೊತೆಗೂ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಮದುವೆ ನಮಗೆ ಸಂತಸ ತಂದಿದೆ ಎನ್ನುತ್ತಾರೆ ಅಭಿಲಾಷ್ ಮನೆಯವರು.