ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮರ್ಶೆ ಹಾಕುವ ಮೂಲಕ ಮಲಯಾಳಂ ಚಲನ ಚಿತ್ರಗಳನ್ನು ವ್ಲಾಗರ್‌ಗಳು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿರುವ ನಿರ್ಮಾಪಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಸಿನಿಮಾ ಬಿಡುಗಡೆಯಾದ ಎರಡು ದಿನಗಳ ನಂತರವೇ ವ್ಲಾಗರ್ ಚಿತ್ರದ ವಿಮರ್ಶೆ ಮಾಡಬೇಕು ಎಂದು ಅಮಿಕಸ್ ಕ್ಯೂರಿ ಹೇಳಿದ್ದಾರೆ. ಜೊತೆಗೆ ಚಲನಚಿತ್ರದ ವಿವಿರಗಳನ್ನು ಬಹಿರಂಗಪಡಿಸುವುದನ್ನು ತಪ್ಪಿಸಬೇಕು, ವೈಯಕ್ತಿಕ ದಾಳಿಗಳು, ಕೆಟ್ಟ ಟೀಕೆಗಳಿಗೆ ಕಡಿವಾಣ ಹಾಕಬೇಕು ಎಂಬುದೂ ಸೇರಿದಂತೆ ಸುಮಾರು ಹತ್ತು ಶಿಫಾರಸುಗಳ ವರದಿಯನ್ನು ಕೂಡಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಸಿನಿಮಾ ವಿಮರ್ಶೆ ವೇಳೆ ಪಾಲಿಸಬೇಕಾದ ಕ್ರಮಗಳ ಕುರಿತಾದ ನೀತಿ ಸಂಹಿತೆ ಸಿದ್ಧಪಡಿಸುವಂತೆ ರಾಜ್ಯ ಪೋಲೀಸ್ ಮುಖ್ಯಸ್ಥರಿಗೆ ನ್ಯಾಯಾಲಯ ಸೂಚಿಸಿತ್ತು. ಈ ವರದಿ ಕೂಡಾ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಜೊತೆಗೆ ಮರುಪರಿಶೀಲನಾ ದೂರಿನ ಆಧಾರದ ಮೇಲೆ ಪೋಲೀಸರು ಕೆಲವು ವ್ಲಾಗರ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನೇಮಕವಾಗಿರುವ ಅಮಿಕಸ್ ಕ್ಯೂರಿಯವರು ವ್ಲಾಗರ್‍ಗಳನ್ನು ನಿಯಂತ್ರಿಸಲು ಶಿಫಾರಸುಗಳನ್ನು ಸಲ್ಲಿಸಿದ್ದಾರೆ. ಮುಂದಿನ ವಾರ ಮತ್ತೆ ವಿಚಾರಣೆ ಮುಂದುವರಿಯಲಿದೆ.