ಮಣಿಪುರ ಹಿಂಸಾಚಾರ ಕುರಿತು ಇಂದು ಅಮಿತ್ ಶಾ ಸರ್ವಪಕ್ಷ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಣಿಪುರ ರಾಜ್ಯವು ಒಂದು ತಿಂಗಳಿನಿಂದ ಬೂದಿ ಮುಚ್ಚಿದ ಕೆಂಡದಂತಾಗಿದೆ. ಅಂತರ-ಜನಾಂಗೀಯ ಸಂಘರ್ಷವು ತೀವ್ರ ಹಿಂಸಾಚಾರಕ್ಕೆ ಕಾರಣವಾಯಿಗಿದೆ. ರಾಜ್ಯದಲ್ಲಿ ಸೇನೆ ಮತ್ತು ಸಿಆರ್‌ಪಿಎಸ್ ಪಡೆಗಳನ್ನು ನಿಯೋಜಿಸಿದ್ದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಎಲ್ಲೋ ಒಂದು ಕಡೆ ಹಿಂಸಾಚಾರ ನಡೆಯುತ್ತಲೇ ಇದೆ. ಮಣಿಪುರದ ಪರಿಸ್ಥಿತಿ ಕುರಿತು ಚರ್ಚಿಸಲು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಸರ್ವಪಕ್ಷ ಸಭೆ ನಡೆಯಲಿದೆ.

ಮೇ 3 ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರವು ಜೂನ್ 25 ರವರೆಗೆ ಇಂಟರ್ನೆಟ್ ನಿಷೇಧವನ್ನು ವಿಸ್ತರಿಸಿದೆ. ಮೇ 3 ರಂದು ಮೈತೇಯಿ ಜನಾಂಗವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ಬೇಡಿಕೆಯನ್ನು ಪ್ರತಿಭಟಿಸಲು ಆಲ್ ಟ್ರೈಬಲ್ಸ್ ಸ್ಟೂಡೆಂಟ್ಸ್ ಯೂನಿಯನ್ (ಎಟಿಎಸ್‌ಯು) ಆಯೋಜಿಸಿದ್ದ ರ್ಯಾಲಿಯಲ್ಲಿ ಘರ್ಷಣೆ ಸಂಭವಿಸಿದಾಗ ಹಿಂಸಾಚಾರ ಭುಗಿಲೆದ್ದಿತು. ರಾಜ್ಯದ ಕಣಿವೆ ಪ್ರದೇಶದಲ್ಲಿ ಮೈತೇಯಿ, ಕುಕಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಎರಡು ಗುಂಪುಗಳ ನಡುವೆ ಪ್ರಾಬಲ್ಯಕ್ಕಾಗಿ ತೀವ್ರ ಹೋರಾಟ ನಡೆಯುತ್ತಿದೆ. ಒಬ್ಬರನ್ನೊಬ್ಬರು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ.

ಈ ಹಿಂಸಾಚಾರಕ್ಕೆ ಈಗಾಗಲೇ 120 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಸಾವಿರಾರು ಜನ ಬೀದಿಗೆ ಬಂದಿದ್ದಾರೆ. ಅಮಿತ್ ಶಾ ಅವರೇ ಮಣಿಪುರಕ್ಕೆ ತೆರಳಿ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ಶಾಂತಿ ಕಾಪಾಡುವಂತೆ ಕರೆ ನೀಡಿದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಇದರ ಜತೆಗೆ ಮ್ಯಾನ್ಮಾರ್ ನಿಂದ ಬರುವ ಭಯೋತ್ಪಾದಕರು ಇನ್ನಷ್ಟು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!