September 19, 2026
Saturday, September 19, 2026
spot_img

ಹುಬ್ಬಳ್ಳಿಗೆ ಬಂದಿಳಿದ ಅಮಿತ್ ಶಾ: ಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಕಾಲೇಜು ಉದ್ಘಾಟನೆಗೆ ಕೌಂಟ್‌ಡೌನ್

ಹೊಸದಿಗಂತ ವರದಿ ಹುಬ್ಬಳ್ಳಿ:

ಉತ್ತರ ಕರ್ನಾಟಕದ ಮಂದಿಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಮಟ್ಟದ ಕೊಡುಗೆ ಸಿಗೋ ಸಮಯ ಬಂದಿದೆ. ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಹತ್ತಿರ ಅದ್ದೂರಿಯಾಗಿ ನಿರ್ಮಾಣವಾಗಿರೋ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಜೆಜಿಎಂಎಂ ವೈದ್ಯಕೀಯ ಕಾಲೇಜು ಕಟ್ಟಡ, ಕೆಎಲ್‌ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಲೋಕಾರ್ಪಣೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯರಾತ್ರಿ ಸರಿಯಾಗಿ 12.30ಕ್ಕೆ ಹುಬ್ಬಳ್ಳಿಯ ಗೋಕುಲ ರಸ್ತೆ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ್ದಾರೆ.

ರಾತ್ರಿ ವೇಳೆಯಾದರೂ ವಿಮಾನ ನಿಲ್ದಾಣದಲ್ಲಿ ನಾಯಕರ ಹುರುಪು ಕಮ್ಮಿಯಾಗಿರಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯಸಭಾ ಸದಸ್ಯ ಎಂ. ನಾಗರಾಜ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಮತ್ತು ಮೇಯರ್ ದುರ್ಗಮ್ಮ ಬೆಜವಾಡ ಸೇರಿದಂತೆ ಪ್ರಮುಖ ನಾಯಕರ ದಂಡೇ ಏರ್‌ಪೋರ್ಟ್‌ನಲ್ಲಿ ನೆರೆದು ಗೃಹ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

ಬೆಳಿಗ್ಗೆ 11.30ಕ್ಕೆ ಉದ್ಘಾಟನಾ ಸಮಾರಂಭ:

ಏರ್‌ಪೋರ್ಟ್‌ನಿಂದ ನೇರವಾಗಿ ನಗರದ ಖಾಸಗಿ ಹೋಟೆಲ್‌ಗೆ ತೆರಳಿದ ಅಮಿತ್ ಶಾ ಅವರು ಅಲ್ಲಿ ವಾಸ್ತವ್ಯ ಹೂಡಿದ್ದಾರೆ. ಶನಿವಾರ ಬೆಳಿಗ್ಗೆ 11.30ಕ್ಕೆ ಗಬ್ಬೂರ್ ಕ್ರಾಸ್ ಬಳಿ ನಡೆಯಲಿರೋ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ನೂತನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯನ್ನು ಅಧಿಕೃತವಾಗಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಿದ್ದಾರೆ.

ಖಾಕಿ ಕಾವಲಿನಲ್ಲಿ ವಾಣಿಜ್ಯ ನಗರಿ:

ಕೇಂದ್ರ ಗೃಹ ಸಚಿವರ ಭೇಟಿ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಮಾನ ನಿಲ್ದಾಣದಿಂದ ಹೋಟೆಲ್ ಹಾಗೂ ಹೋಟೆಲ್‌ನಿಂದ ಕಾರ್ಯಕ್ರಮ ನಡೆಯುವ ಗಬ್ಬೂರ್ ಕ್ರಾಸ್ ಮಾರ್ಗದುದ್ದಕ್ಕೂ ಸೂಕ್ತ ರಕ್ಷಣೆ ನೀಡಲಾಗಿದ್ದು, ನಗರದಲ್ಲಿ ಯಾವುದೇ ಸಂಚಾರ ಅಡಚಣೆಯಾಗದಂತೆ ಖಾಕಿ ಪಡೆ ಕಟ್ಟುನಿಟ್ಟಿನ ನಿಗಾ ವಹಿಸಿದೆ.

ಉತ್ತರ ಕರ್ನಾಟಕ ಭಾಗದ ಜನರಿಗೆ ಆಧುನಿಕ ಶೈಲಿಯ ವೈದ್ಯಕೀಯ ಚಿಕಿತ್ಸೆ ಮತ್ತು ಉನ್ನತ ಶಿಕ್ಷಣ ಉಚಿತ ಹಾಗೂ ಸುಲಭವಾಗಿ ಸಿಗುವಂತಾಗಲು ಈ ಹೊಸ ಕೆಎಲ್‌ಇ ಆಸ್ಪತ್ರೆ ಮತ್ತು ಕಾಲೇಜು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !