ಹೊಸದಿಗಂತ ಶಿವಮೊಗ್ಗ :
ನನ್ನ ಪ್ರಶ್ನೆಗಳಿಗೆ ಗೃಹ ಸಚಿವ ಅಮಿತ್ ಶಾ ಅವರ ಬಳಿ ಉತ್ತರ ಇರಲಿಕ್ಕಿಲ್ಲ ಎನ್ನಿಸುತ್ತದೆ. ಅದೇ ಕಾರಣಕ್ಕೆ ಭೇಟಿ ನಿರಾಕರಿಸಿದ್ದಾರೆ ಎಂದು ಮಾಜಿ ಡಿಸಿಎಂ ಹಾಗೂ ಶಿವಮೊಗ್ಗ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.
ದೆಹಲಿಯಿಂದ ಇಂದು ಮಧ್ಯಾಹ್ನ ನಗರಕ್ಕೆ ಆಗಮಿಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಮಿತ್ ಶಾ ಅವರ ಪ್ರಶ್ನೆಗಳಿಗೆ ಉತ್ತರ ಕೊಡಲು ತಯಾರಾಗಿ ಹೋಗಿದ್ದೆ. ಮುಖ್ಯವಾಗಿಯಡಿಯೂರಪ್ಪನವರ ಕುಟುಂಬ ರಾಜಕಾರಣ ಹಾಗೂ ಇಡೀ ಬಿಜೆಪಿ ಅವರ ಕೈಯಲ್ಲಿ ಸಿಕ್ಕಿರುವ ಬಗ್ಗೆ ವಿವರವಾಗಿ ತಿಳಿಸಲು ಸಿದ್ದತೆ ಮಾಡಿಕೊಂಡಿದ್ದೆ. ಆದರೆ ಭೇಟಿಗೆ ಸಮಯವಿಲ್ಲ ಎಂಬ ಸಂದೇಶ ಅವರ ಕಚೇರಿಯಿಂದ ಬಂದಿದ್ದರಿಂದ ವಾಪಸ್ ಬಂದಿರುವುದಾಗಿ ಹೇಳಿದರು.
ಅಮಿತ್ ಶಾ ಅವರ ಚಾಣಾಕ್ಷತನವನ್ನು ಗೌರವಿಸುತ್ತೇನೆ. ಅವರು ನನ್ನನ್ನು ಭೇಟಿಯಾಗದಿರುವುದನ್ನು ಗಮನಿಸಿದರೆ, ವಾಪಸ್ ಹೋಗಿ ನಾಮಪತ್ರ ಸಲ್ಲಿಸಿ ಸ್ವತಂತ್ರವಾಗಿ ಗೆದ್ದು ಬಾ ಎಂಬ ಸಂದೇಶ ನೀಡಿದ್ದಾರೆ. ಖಂಡಿತವಾಗಿಯೂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರುವುದಾಗಿ ಹೇಳಿದರು.
ಅಮಿತ್ ಶಾ ಅವರ ಪ್ರತಿನಿಧಿಯಾಗಿಯೇ ನಮ್ಮ ಮನೆಗೆ ಬಂದಿದ್ದ ರಾಧಾಮೋಹನ್ ಅಗರ್ವಾಲ್ ಅವರನ್ನು ನಿರ್ಲ್ಯಕ್ಷ್ಯ ಮಾಡಿಲ್ಲ. ಅವರೊಂದಿಗೆ ಬಂದಿದ್ದ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ ಕಾಲಿಗೆ ನಮಸ್ಕರಿಸಿ ಆರ್ ಎಸ್ಎಸ್ ಸೂಚನೆಯನ್ನು ಮೀರುತ್ತಿದ್ದೇನೆ ದಯವಿಟ್ಟು ಕ್ಷಮಿಸಿ ಪಕ್ಷ ಶುದ್ಧೀಕರಣಕ್ಕೆ ಬೇರೆ ಮಾರ್ಗವಿಲ್ಲ ಎಂದು ಹೇಳಿದ್ದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಷಡ್ಯಂತ್ರದ ರಾಜಕಾರಣ ಮಾಡುವುದರಲ್ಲಿ ನಿಸ್ಸಿಮರು. ನನ್ನ ಮನವೊಲಿಕೆ ಬಗ್ಗೆ ಹೇಳಿಕೆ ನೀಡುವುದನ್ನು ಬಿಟ್ಟು ಸುಮ್ಮನಿರಲಿ. ಇಂತಹ ಹೇಳಿಕೆ ಕೊಟ್ಟು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಮಾಡಬಾರದು. ಗೊಂದಲ ಸೃಷ್ಟಿಸಿದರೆ ಬೇರೆಯದ್ದೇ ರೀತಿಯಲ್ಲಿ ಉತ್ತರ ಕೊಡಬೇಕಾಗುತ್ತದೆ. ಅಣ್ಣನ ಸೋಲಿನ ಭೀತಿಯಿಂದ ಹೇಳಿಕೆ ಕೊಡದಂತೆ ಎಚ್ಚರಿಸಿದರು.