ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಒಂದು ರಾಷ್ಟ್ರ, ಒಂದು ಚುನಾವಣೆ’ ವ್ಯವಸ್ಥೆಯನ್ನು ತನ್ನ ಈಗಿನ ಅವಧಿಯಲ್ಲೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಜಾರಿಗೆ ತರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೆಯ ಅವಧಿಗೆ ರಚನೆಯಾಗಿರುವ ಸರ್ಕಾರವು 100 ದಿನಗಳನ್ನು ಪೂರೈಸಿರುವ ಸಂದರ್ಭ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾ , ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧಪಡಿಸಿದ ಪ್ರಣಾಳಿಕೆಯಲ್ಲಿ, ‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆಯನ್ನು ಜಾರಿಗೆ ತರುವ ಭರವಸೆ ಇದೆ.
ವಕ್ಫ್ (ತಿದ್ದುಪಡಿ) ಮಸೂದೆಯು ವಕ್ಫ್ ಆಸ್ತಿಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ, ಈ ಮಸೂದೆಯು ಮುಂಬರುವ ದಿನಗಳಲ್ಲಿ ಸಂಸತ್ತಿನ ಅಂಗೀಕಾರ ಪಡೆಯಬಹುದು ಎಂದು ಶಾ ಭರವಸೆ ವ್ಯಕ್ತಪಡಿಸಿದರು.
ಈ ಮಸೂದೆಯು ವಕ್ಫ್ ಆಸ್ತಿಗಳ ದುರ್ಬಳಕೆಯನ್ನು ತಡೆಯುವ ಉದ್ದೇಶವನ್ನು ಕೂಡ ಹೊಂದಿದೆ ಎಂದರು. ವಕ್ಫ್ (ತಿದ್ದುಪಡಿ) ಮಸೂದೆಯನ್ನು ಈಗ ಸಂಸತ್ತಿನ ಜಂಟಿ ಸಮಿತಿಗೆ (ಜೆಪಿಸಿ) ಪರಿಶೀಲನೆಗಾಗಿ ಒಪ್ಪಿಸಲಾಗಿದೆ ಎಂದರು.
ಆಗಸ್ಟ್ 15ರಂದು ಮಾಡಿದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಅವರೂ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಬಗ್ಗೆ ಪ್ರಸ್ತಾಪಿಸಿದ್ದರು. ದೇಶದಲ್ಲಿ ಪದೇ ಪದೇ ಚುನಾವಣೆಗಳು ಎದುರಾಗುವುದರಿಂದ ಅಭಿವೃದ್ಧಿಗೆ ಅಡ್ಡಿ ಉಂಟಾಗುತ್ತದೆ ಎಂದು ಅವರು ಹೇಳಿದ್ದರು.