ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಝಾನ್ಸಿಯಲ್ಲಿ 27 ವರ್ಷದ ಸೋನಾಲಿ ಬುಧೋಲಿಯಾ ಎಂಬ ಮಹಿಳೆಯ ಸಾವಿನ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.
4 ವರ್ಷದ ಮಗಳು ತನ್ನ ತಾಯಿಯನ್ನು ಕೊಂದಿದ್ದು ಯಾರು? ಅಮ್ಮನ ಸಾಯಿಸಿದ್ದು ಹೇಗೆ ಅನ್ನೋದರ ಬಗ್ಗೆ ಡ್ರಾಯಿಂಗ್ ಸ್ಕೆಚ್ ಬರೆದು ಅಪರಾಧವನ್ನು ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನಾಲಿ ಬುಧೋಲಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿ ಪತಿ ಸಂದೀಪ್ ಬುಧೋಲಿಯಾ ನಂಬಿಸಿದ್ದರು. ಆದರೆ ಈಗ ತನ್ನ ತಾಯಿಯನ್ನು ಕೊಂದಿದ್ದು ಬೇರಾರು ಅಲ್ಲ, ತನ್ನ ತಂದೆಯೇ ಎಂದು 4 ವರ್ಷದ ಮಗಳು ಸ್ಕೆಚ್ ಮೂಲಕ ಹೇಳಿದ್ದಾಳೆ.
ಮಗಳ ಡ್ರಾಯಿಂಗ್ ಸ್ಕೆಚ್‌ನಿಂದ ತಂದೆಯೇ ಕೊಲೆಗಾರ ಅನ್ನೋ ಸುಳಿವು ಪೊಲೀಸರಿಗೆ ಸಿಕ್ಕಿದೆ.
ಪತಿ ಸಂದೀಪ್ ಬುಧೋಲಿಯಾನಿಂದ ಪತ್ನಿ ಸೋನಾಲಿಯ ಹತ್ಯೆ ಮಾಡಲಾಗಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲಾಗಿತ್ತು.
ಪೊಲೀಸ್ ವರಿಷ್ಠಾಧಿಕಾರಿ(ನಗರ) ಜ್ಞಾನೇಂದ್ರ ಕುಮಾರ್ ಸಿಂಗ್, ಈ ಘಟನೆ ಸೋಮವಾರ ಸಂಜೆ ಪಂಚವಟಿ ಕಾಲೋನಿಯಲ್ಲಿ ನಡೆದಿದೆ. ಆರಂಭದಲ್ಲಿ, ಇದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಎಂದು ವರದಿಯಾಗಿತ್ತು. ಆದರೆ ವೈದ್ಯಕೀಯ ಕಾಲೇಜಿನಲ್ಲಿ ಮೃತ ಮಹಿಳೆಯ ಅತ್ತೆ-ಮಾವ ಮತ್ತು ಆಕೆಯ ತಾಯಿಯ ಕುಟುಂಬದ ನಡುವೆ ಜಗಳ ನಡೆದು, ಕೊಲೆಯಾಗಿದೆ ಎಂದು ಆರೋಪಿಸಿದರು.
ಅತ್ತೆ-ಮಾವಂದಿರನ್ನು ಬಂಧಿಸುವವರೆಗೆ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲ್ಲ ಎಂದು ಮೃತ ಮಹಿಳೆಯ ಕುಟುಂಬ ಪಟ್ಟು ಹಿಡಿದಿತ್ತು. ಮಾಹಿತಿ ಪಡೆದ ನಂತರ, ಪೊಲೀಸರು ಮಧ್ಯಪ್ರವೇಶಿಸಿ, ಎರಡೂ ಕಡೆಯವರನ್ನು ಸಮಾಧಾನಪಡಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ದೂರಿನ ಆಧಾರದ ಮೇಲೆ, ನಾವು ಪ್ರಕರಣ ದಾಖಲಿಸಿಕೊಂಡು, ಪ್ರಮುಖ ಆರೋಪಿ, ಆಕೆಯ ಪತಿ ಸಂದೀಪ್ ಬುಧೋಲಿಯಾ ಅವರನ್ನು ಬಂಧಿಸಿದ್ದೇವೆ ಎಂದು ಸಿಂಗ್ ಹೇಳಿದರು.
ಮೃತರನ್ನು 28 ವರ್ಷದ ಸೋನಾಲಿ ಎಂದು ಗುರುತಿಸಲಾಗಿದ್ದು, ಆರು ವರ್ಷಗಳ ಹಿಂದೆ ಸಂದೀಪ್ ಬುಧೋಲಿಯಾ ಅವರನ್ನು ವಿವಾಹವಾಗಿದ್ದರು. ಸೋನಾಲಿ ಮದುವೆಯಾದಾಗಿನಿಂದ ವರದಕ್ಷಿಣೆ ಕಿರುಕುಳವನ್ನು ಎದುರಿಸುತ್ತಿದ್ದರು ಎಂದು ಟಿಕಮ್‌ಗಢ (ಮಧ್ಯಪ್ರದೇಶ)ದ ಲಿಧೌರಾ ನಿವಾಸಿ, ಆಕೆಯ ತಂದೆ ಸಂಜೀವ್ ತ್ರಿಪಾಠಿ ಆರೋಪಿಸಿದ್ದಾರೆ.