ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೀಡಿದ್ದ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ತಮ್ಮ ತಾಯಿ ಸೋನಿಯಾ ಗಾಂಧಿ ನೀಡಿದ ಹೇಳಿಕೆಗಳಿಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪಷ್ಟನೆ ನೀಡಿದ್ದಾರೆ. ತಮ್ಮ ತಾಯಿಯನ್ನು ಸಮರ್ಥಿಸಿಕೊಂಡ ಪ್ರಿಯಾಂಕಾ ಗಾಂಧಿ, ನನ್ನ ತಾಯಿ 78 ವರ್ಷ ವಯಸ್ಸಿನ ಮಹಿಳೆ. ಹೀಗಾಗಿ, ರಾಷ್ಟ್ರಪತಿಗಳ ಬಗ್ಗೆ ಕಾಳಜಿಯಿಂದ ಅವರು ಇಷ್ಟು ದೀರ್ಘ ಭಾಷಣವನ್ನು ಓದಿ ಸುಸ್ತಾಗಿರಬಹುದು, ಅಯ್ಯೋ ಪಾಪ ಎಂದು ಹೇಳಿದ್ದರೇ ವಿನಃ ಅವಮಾನಿಸುವ ಉದ್ದೇಶದಿಂದಲ್ಲ ಎಂದಿದ್ದಾರೆ.
ಸೋನಿಯಾ ಗಾಂಧಿ ದ್ರೌಪದಿ ಮುರ್ಮು ಅವರನ್ನು ಬಹಳ ಗೌರವಿಸುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಒತ್ತಿ ಹೇಳಿದರು. ಮಾಧ್ಯಮಗಳು ಅವರ ಹೇಳಿಕೆಗಳನ್ನು ತಿರುಚಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಈ ರೀತಿಯ ವಿಷಯವನ್ನು ಮಾಧ್ಯಮಗಳು ತಿರುಚಿರುವುದು ತುಂಬಾ ದುರದೃಷ್ಟಕರ. ಅವರಿಬ್ಬರೂ ನಮಗಿಂತ ಹಿರಿಯರು. ಅಮ್ಮ ಎಂದಿಗೂ ರಾಷ್ಟ್ರಪತಿಗಳಿಗೆ ಅಗೌರವವನ್ನು ಸೂಚಿಸುವುದಿಲ್ಲ ಎಂದು ಪ್ರಿಯಾಂಕಾ ಹೇಳಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, “ರಾಷ್ಟ್ರಪತಿಗಳು ಕೊನೆಯಲ್ಲಿ ಬಹಳ ದಣಿದಿದ್ದರು. ಆಕೆ ಕಷ್ಟಪಟ್ಟು ಮಾತನಾಡುತ್ತಿದ್ದರು, ಅವರಿಗೆ ಬಹಳ ಸುಸ್ತಾಗಿತ್ತು. ಅಯ್ಯೋ ಪಾಪ… ಅವರನ್ನು ನೋಡಿದರೆ ಬೇಸರವಾಯಿತು. ದ್ರೌಪದಿಯವರ ಭಾಷಣ ತುಂಬ ಬೋರಿಂಗ್ ಆಗಿತ್ತು, ಅವರು ಹೇಳಿದ್ದನ್ನೇ ಹೇಳುತ್ತಿದ್ದರು ಎಂದರು ಎಂದು ಸೋನಿಯಾ ಗಾಂಧಿ ಟೀಕಿಸಿದ್ದರು.