ಹೊಸ ದಿಗಂತ ವರದಿ,ಮಂಗಳೂರು:
ಮಂಗಳೂರಿನ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ಶ್ರೀ ಬ್ರಹ್ಮಸ್ಥಾನ ಮಹೋತ್ಸವ ‘ಅಮೃತ ಸಂಗಮ-೨೦೨೬’ ಗುರುವಾರ ಅದ್ಧೂರಿಯಾಗಿ ಆರಂಭಗೊಂಡಿದೆ. ಸಹಸ್ರಾರು ಭಕ್ತರ ಮಾತೆ, ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನಾಯಕಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಸತ್ಸಂಗ, ಪ್ರವಚನ ನಡೆಸಿಕೊಡುವುದರೊಂದಿಗೆ ಭಕ್ತರನ್ನು ದಿವ್ಯ ಆಲಿಂಗನದ ಮೂಲಕ ಹರಸುತ್ತಿದ್ದಾರೆ. ಮೊದಲ ದಿನವಾದ ಗುರುವಾರ ಸಾವಿರಾರು ಭಕ್ತರು ಅಮ್ಮನ ದರುಶನ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನಾಯಕಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರು, ಬದುಕಿನಲ್ಲಿ ತಾಳ್ಮೆ ಅತೀ ಮುಖ್ಯ. ಎಷ್ಟೇ ಕಠಿಣ ಪರಿಸ್ಥಿತಿ ಎದುರಾದರೂ ಸಮಚಿತ್ತದಿಂದ ಎದುರಿಸಬೇಕು. ಪರಿಸ್ಥಿತಿಗೆ ಹೊಂದಿಕೊಂಡು ಬದುಕುವುದುಕನ್ನು ಕಲಿಯಬೇಕು. ಸನಾತನ ಧರ್ಮ ಇಂತಹ ಜೀವನ ಮೌಲ್ಯವನ್ನು ಸಾರುತ್ತದೆ ಹೇಳಿದರು.
ಪರಿಸರವನ್ನು ಪ್ರೀತಿಸಬೇಕು
ಪ್ರಸ್ತುತ ಪ್ರಕೃತಿಯ ಮೇಲೆ ಮಾನವನ ದೌರ್ಜನ್ಯ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಬೀಳಲೇಬೇಕು. ಇಲ್ಲವಾದಲ್ಲಿ ಭವಿಷ್ಯದ ದಿನಗಳು ಗಂಭೀರವಾಗಿರಲಿವೆ. ಪ್ರತಿಯೊಬ್ಬರೂ ಪರಿಸರವನ್ನು ಪ್ರೀತಿಸಬೇಕು. ಸಾಂಕ್ರಾಮಿಕ ರೋಗಗಳು, ನೈಸರ್ಗಿಕ ವಿಕೋಪಗಳು ಮತ್ತು ಹವಾಮಾನ ವೈಪರೀತ್ಯಗಳು ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಮರುಚಿಂತನೆ ಮಾಡಲು ಮಾನವಕುಲಕ್ಕೆ ನೀಡುತ್ತಿರುವ ಎಚ್ಚರಿಕೆಯ ಕರೆಗಳಾಗಿವೆ. ನಾವು ಸಮುದಾಯಗಳು ಮತ್ತು ರಾಷ್ಟ್ರಗಳ ನಡುವಿನ ಸಂಘರ್ಷಗಳಲ್ಲಿ ಸಂಧಾನ ಹಾಗೂ ರಾಜಿ ಸೂತ್ರಗಳು ಕೆಲಸ ಮಾಡಬಹುದು, ಆದರೆ ಪ್ರಕೃತಿಯೊಂದಿಗೆ ಇವುಗಳು ನಡೆಯುವುದಿಲ್ಲ. ಆ ಎಚ್ಚರ ನಮ್ಮಲ್ಲಿರಬೇಕು ಎಂದು ಅಮ್ಮ ನುಡಿದರು.

ಮಹಿಳಾ ಸಬಲೀಕರಣದ ಶಕ್ತಿ ‘ಅಮ್ಮ’
ಪ್ರವಚನ ಕಾರ್ಯಕ್ರಮಕ್ಕೆ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸರ್ಕಾರವೊಂದು ಮಾಡಬೇಕಾದ ಮತ್ತು ಮಾಡಲಾಗದ ಕೆಲಸವನ್ನು ಅಮ್ಮನವರು ಅತ್ಯಂತ ಶ್ರದ್ಧೆಯಿಂದ ಯಾವುದೇ -ಲಾಪೇಕ್ಷೆಯಿಲ್ಲದೆ ಮಾಡುತ್ತಾ ಬಂದಿದ್ದಾರೆ. ಆದ್ದರಿಂದಲೇ ವಿಶ್ವವೇ ಅವರನ್ನು ಅಮ್ಮಾ ಎಂದು ಕೊಂಡಾಡುತ್ತಿದೆ. ಅವರು ಮಹಿಳಾ ಸಬಲೀಕರಣದ ಶಕ್ತಿಯೂ ಹೌದು ಎಂದು ಶ್ಲಾಸಿದರು.

ಅಮ್ಮನವರು ಜಗತ್ತಿಗೆ ಜ್ಞಾನ ಕೊಡುವ ಜ್ಞಾನೇಶ್ವರಿಯಾಗಿದ್ದಾರೆ. ಬಡವರು, ದೀನರು, ದಲಿತರ ಸೇವೆ ಮೂಲಕ ದೇವರನ್ನು ಕಂಡರು. 4 ಕೋಟಿ ಜನರಿಗೆ ಅಪ್ಪುಗೆಯ ಆಶೀರ್ವಾದ ನೀಡಿ ಧಾರ್ಮಿಕ ಜ್ಞಾನ ಮೂಡಿಸಿದ್ದಾರೆ. ಆಧ್ಯಾತ್ಮ ಶಿಕ್ಷಣ, ಜ್ಞಾನ ಶಿಕ್ಷಣ, ಸಾಮಾಜಿಕ ಶಿಕ್ಷಣವನ್ನು ಸಮಾಜಕ್ಕೆ ಬೋಧಿಸಿದ ಮಾಹಾಮಾತೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್, ಅದಾನಿ ಸಂಸ್ಥೆಯ ಕಿಶೋರ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.



