ಹೊಸದಿಗಂತ ವರದಿ ಕುಶಾಲನಗರ:
ಮಳೆಯಿಂದ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆಯಿಂದ ಶಾಲೆಯ ಕಬ್ಬಿಣದ ಗೇಟ್ ಕಳಚಿ ಬಿದ್ದ ಪರಿಣಾಮ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕುಶಾಲನಗರ ತಾಲೂಕಿನ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಬಸವನಹಳ್ಳಿ ಹಾಡಿಯ ಸತೀಶ ಮತ್ತು ಪವಿತ್ರ ದಂಪತಿಯ ಪುತ್ರಿ ಅಪೂರ್ವ (4) ಎಂದು ಗುರುತಿಸಲಾಗಿದೆ. ಮನೆಯ ಸಮೀಪವಿರುವ ಗಿರಿಜನ ಆಶ್ರಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತನ್ನ ಅಕ್ಕನನ್ನು ಕರೆತರಲು ಬಾಲಕಿ ಪ್ರತಿದಿನ ಶಾಲೆಯ ಗೇಟ್ ಬಳಿ ಬಂದು ಆಟವಾಡುವುದು ವಾಡಿಕೆಯಾಗಿತ್ತು.
ಗೇಟ್ ಬಿದ್ದು ಸ್ಥಳದಲ್ಲೇ ಸಾವು
ಶುಕ್ರವಾರ ಸಂಜೆ ಬಾಲಕಿ ಎಂದಿನಂತೆ ಶಾಲೆಯ ಗೇಟ್ ಬಳಿ ಬಂದಿದ್ದ ವೇಳೆ, ಮಳೆಯಿಂದ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆಯೊಂದಿಗೆ ಬೃಹತ್ ಕಬ್ಬಿಣದ ಗೇಟ್ ಕಳಚಿ ಬಾಲಕಿಯ ಮೇಲೆ ಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅಪೂರ್ವ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಅಧಿಕಾರಿಗಳ ಭೇಟಿ, ಕುಟುಂಬಕ್ಕೆ ಸಾಂತ್ವನ
ಘಟನಾ ಸ್ಥಳಕ್ಕೆ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಗಿರಿಜನ ಮುಖಂಡ ಆರ್.ಕೆ. ಚಂದ್ರ ಭೇಟಿ ನೀಡಿ ಶಾಲೆಯ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದರು. ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ದೂರವಾಣಿ ಮೂಲಕ ಮೃತ ಬಾಲಕಿಯ ಪೋಷಕರಿಗೆ ಸಾಂತ್ವನ ತಿಳಿಸಿದರು.
ಜಿಲ್ಲಾ ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಭಾಗೀರಥಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ತಹಶೀಲ್ದಾರ್ ಕೃಷ್ಣಮೂರ್ತಿ, ಸ್ಥಳೀಯ ಮುಖಂಡರಾದ ಚಂದ್ರಶೇಖರ್, ಜಗ, ಮಹೇಶ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಪಿಡಿಒ ಸುಮೇಶ್ ಸೇರಿದಂತೆ ಹಲವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.



