ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಚೆನ್ನೈ ಕನ್ನಿಗೈಪೈರ್‌ನಲ್ಲಿರುವ ಖಾಸಗಿ ಸೀಫುಡ್ ರಫ್ತು ಘಟಕದಲ್ಲಿ ಅಮೋನಿಯಾ ಸೋರಿಕೆಯಾಗಿದ್ದು, ಏಳು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.
ತಿರುವಲ್ಲೂರು ಜಿಲ್ಲೆಯ ಪೆರಿಯಪಾಳಯಂ ಬಳಿ ಇರುವ ಕಾರ್ಖಾನೆಯಲ್ಲಿ ಬೇರೆ ಬೇರೆ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅಸ್ಸಾಂ, ಒಡಿಶಾ ಹಾಗೂ ಜಾರ್ಖಾಂಡ್‌ನ 120 ಅತಿಥಿ ಕಾರ್ಮಿಕರು ಕಾರ್ಖಾನೆ ಆವರಣದಲ್ಲಿ ಇದ್ದರು. ಇಂದು ಭಾನುವಾರವಾದ ಕಾರಣ ಅವರು ತಮಗೆ ನೀಡಿದ್ದ ವಸತಿ ನಿಲಯದಲ್ಲಿ ತಂಗಿದ್ದರು.
ಸೀಫುಡ್ ಸಂಸ್ಕರಣಾ ಘಟಕದಿಂದ ಅಮೋನಿಯಾ ಸೋರಿಕೆಯಾಗಿ ಇಡೀ ಆವರಣಕ್ಕೆ ಹರಡಿದೆ. ಇದರಿಂದಾಗಿ ಏಳು ಮಂದಿ ಮೃತಪಟ್ಟಿದ್ದು, 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.ಹಲವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ, ಇನ್ನು ಕೆಲವರು ಬಾಯಿ ಮತ್ತು ಮೂಗಿನ ರಕ್ತಸ್ರಾವದಿಂದ ಬಳಲುತ್ತಿದ್ದರು. ಒಂಬತ್ತು ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಪೆರಿಯಪಾಳಯಂ ಪೊಲೀಸ್ ಠಾಣೆ, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು, ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.



