ಅಮೃತಯಾತ್ರೆ: ಹೆಚ್ಚುತ್ತಿದೆ ವಿದೇಶಿ ಪ್ರವಾಸಿಗರ ಸಂಖ್ಯೆ, ವಿದೇಶಿ ವಿನಿಮಯದಲ್ಲೂ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ʼಅತಿಥಿ ದೇವೋಭವʼ ಎಂಬುದು ಭಾರತವು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಪದ್ಧತಿ. ನಮ್ಮನ್ನರಸಿ ಬಂದವರನ್ನು ಭಾರತ ಸತ್ಕರಿಸಿಯೇ ಕಳಿಸಿದೆಯೇ ಹೊರತು ಭಾರತದಿಂದ ಖಾಲಿ ಕೈಯಲ್ಲಿ ವಾಪಸ್ಸಾದವರ ಉದಾಹರಣೆ ವಿರಳ. ಸ್ವಾತಂತ್ರ್ಯ ಬಂದ ನಂತರವೂ ಇದು ಅನೂಚಾನವಾಗಿ ಮುಂದುವರೆದಿದೆ. ಪ್ರವಾಸೋದ್ಯಮ ಹಾಗು ಅತಿಥಿ ಸತ್ಕಾರವು ಭಾರತದ ಪ್ರಮುಖ ಉದ್ಯಮಗಳಲ್ಲೊಂದಾಗಿ ಮಾರ್ಪಟ್ಟಿದೆ. ಪರಿಣಾಮ ಇಂದು ಅನೇಕ ವಿದೇಶಿಗರ ಪಾಲಿಗೆ ಭಾರತ ಅತ್ಯಂತ ನೆಚ್ಚಿನ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಇದರ ಪರಿಣಾಮ ಪ್ರವಾಸೋದ್ಯಮ ಕೇಂದ್ರಿತ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತಿದ್ದು ಇದರ ಜೊತೆಗೆ ಭಾರತದ ವಿದೇಶಿ ವಿನಿಮಯದಲ್ಲಿನ ಗಳಿಕೆಯೂ ಹೆಚ್ಚಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರೋ ಸಮಯದಲ್ಲಿ ಈ ಬೆಳವಣಿಗೆಯ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು.

ಸ್ವಾತಂತ್ರ್ಯ ಬಂದ ಆರಂಭಿಕ ವರ್ಷಗಳಲ್ಲಿ ಪ್ರವಾಸಿ ವಿದೇಶಿಗರ ಸಂಖ್ಯೆ ಅತ್ಯಂತ ಕಡಿಮೆಯಿತ್ತು 1991ರಲ್ಲಿ 4,318 ಕೋಟಿ ರುಪಾಯಿಗಳಷ್ಟು ವಿದೇಶಿ ವಿನಿಮಯ ಆದಾಯವು ಕೇವಲ ವಿದೇಶಿ ಪ್ರವಾಸಿಗರಿಂದಲೇ ದೊರಕಿತ್ತು. ನಂತರದಲ್ಲಿ ಪ್ರವಾಸೋದ್ಯಮಕ್ಕೆ ನೀಡಿದ ಉತ್ತೇಜನದಿಂದಾಗಿ ಈ ಗಳಿಕೆ ಗಣನೀಯವಾಗಿ ಏರಿಕೆಯಾಗಿದೆ. 2019ರಲ್ಲಿ 2,11, 661 ಕೋಟಿ ರುಪಾಯಿಗಳಷ್ಟು ವಿದೇಶಿ ವಿನಿಮಯ ಆದಾಯ ದಾಖಲಾಗಿದೆ. ಕಳೆದೊಂದು ದಶಕದಲ್ಲಿಯೇ ಹೆಚ್ಚುಕಡಿಮೆ ಈ ಆದಾಯದಲ್ಲಿ 150 ಶೇಕಡಾ ಏರಿಕೆಯಾಗಿದೆ. ವಿದೇಶಿ ಭಾರತೀಯರನ್ನು ಹೆಚ್ಚು ಹೆಚ್ಚು ಸೆಳೆಯಲು ಆಕರ್ಷಕ ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ಇತ್ತೀಚೆಗಷ್ಟೇ ಆರಂಭವಾದ ಪ್ರಪಂಚದ ಅತಿ ದೊಡ್ಡ ನದಿವಿಹಾರ ʼಗಂಗಾ ವಿಲಾಸ್‌ʼ ಈ ನಿಟ್ಟಿನಲ್ಲಿ ಕೊಡಬಹುದಾದ ತಾಜಾ ಉದಾಹರಣೆ. ಇದಲ್ಲದೇ 2014ರಲ್ಲಿ ಜಾರಿಗೆ ತರಲಾದ ಇ-ಟೂರಿಸ್ಟ್‌ ವಿಸಾದಂತಹ ಉಪಕ್ರಮಗಳು ವಿದೇಶಿಗರನ್ನು ಸೆಳೆಯಲು ಕೊಡುಗೆ ನೀಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!