Wednesday, February 28, 2024

ಮಂಡ್ಯದಲ್ಲಿ ಹನುಮ ಧ್ವಜ ಮರು ಸ್ಥಾಪನೆಗೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಮನವಿ 

ಹೊಸದಿಗಂತ ವರದಿ,ಚಿತ್ರದುರ್ಗ: 
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ತೆರವು ಮಾಡಿರುವ ಹನುಮ ಧ್ವ್ವಜ ಮರು ಸ್ಥಾಪನೆ ಮಾಡುವಂತೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಕಳೆದ ೪೦ ವರ್ಷಗಳಿಂದ ಹಾರಾಡುತ್ತಿದ್ದ ಹನುಮ ದ್ವಜ ಸ್ಥಂಬವನ್ನು ನವೀಕರಣ ಮಾಡಿ, ಆಸ್ತಿಕ ಗ್ರಾಮಸ್ಥರು ಸೇರಿ ಹೊಸ ಅರ್ಜುನ ಸ್ಥಂಬದಲ್ಲಿ ಏರಿಸಿದ್ದ ಹನುಮ ಧ್ವಜವನ್ನು ಅಲ್ಲಿನ ಆಡಳಿತವು ಸರ್ಕಾರದ ಆದೇಶವೆಂದು ಹೇಳಿ ಕೆಳಗೆ ಇಳಿಸಿದೆ. ಈ ಘಟನೆಯಿಂದ ರಾಜ್ಯದ ಎಲ್ಲ ಹಿಂದೂ ಬಾಂಧವರ ಮನಸ್ಸಿಗೆ ನೋವನ್ನುಂಟುಮಾಡಿದೆ. ದ್ವಜ ಇಳಿಸಿದ ಘಟನೆಯನ್ನು ಹಿಂದೂ ಸಮಾಜವು ಖಂಡಿಸುತ್ತದೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೇಳಿದರು.
ಶ್ರೀರಾಮ ಭಜನಾ ಮಂಡಳಿಯವರು ಕಳೆದ ೪೦ ವರ್ಷಗಳಿಂದ ಕೆರಗೋಡು ಗ್ರಾಮದಲ್ಲಿ ಯಾವ ತೊಂದರೆಯನ್ನೂ ಮಾಡದೆ ಭಜನೆ ಮಾಡುತ್ತಾ ಬಂದಿದ್ದಾರೆ. ಈ ಗ್ರಾಮದಲ್ಲಿ ಯಾವಾಗಲೂ ಹನುಮ ಧ್ವಜ ಹಾರಿಸುತ್ತಿದ್ದ ಧ್ವಜದ ಸ್ಥಂಬವು ಶಿಥಿಲಗೊಂಡ ಕಾರಣಕ್ಕೆ, ಶ್ರೀರಾಮ ಭಜನಾ ಮಂಡಳಿ ಮತ್ತಿತರರು ಕೆರಗೋಡು ಗ್ರಾಮ ಪಂಚಾಯಿತಿಯಲ್ಲಿ ದಿನಾಂಕ: ೨೯-೧೧-೨೦೨೩ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಮಾಡಿದರು. ಅದರಂತೆ ಸದರಿ ಸ್ಥಳದಲ್ಲಿ ಉತ್ತಮ ಧ್ವಜ ಸ್ಥಂಬ ಸ್ಥಾಪಿಸಿ, ಅದರಲ್ಲಿ ಹನುಮ ಧ್ವಜ ಆರಿಸಲಾಗಿತ್ತು ಎಂದರು.
ಹೀಗೆ ಹಾರಿಸಿದ್ದ ಹನುಮ ಧ್ವಜವನ್ನು ಸ್ಥಳೀಯ ಸರ್ಕಾರಿ ಅಧಿಕಾರಿಗಳು ತೆರವು ಮಾಡಿದ್ದಾರೆ. ಇದರಿಂದ ಎಲ್ಲರಿಗೂ ನೋವುಂಟಾಗಿದೆ. ಈ ಘಟನೆಯಿಂದ ಸಮಸ್ತ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದಂತಾಗಿದೆ. ಈ ಸ್ಥಳದಲ್ಲಿ ಎಂದಿನಂತೆ ಹನುಮ ಧ್ವಜವನ್ನು ಮತ್ತೆ ಹಾರಿಸಬೇಕೆಂದು ಬಹುಸಂಖ್ಯಾತ ಹಿಂದು ಸಮಾಜದ ಪರವಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು.

ಕರ್ನಾಟಕದಲ್ಲೇ ಹುಟ್ಟಿದ, ಶೌರ್ಯದ ಸಂಕೇತವಾಗಿರುವ, ರಾಜ್ಯದ ಯುವ ಜನತೆಗೆ ಬುದ್ಧಿ, ಯಶಸ್ಸು, ಶಕ್ತಿ, ಶೌರ್ಯ, ಪರಾಕ್ರಮ, ಇತ್ಯಾದಿ ಸದ್ಗುಣಗಳಿಗೆ ಪ್ರೇರಣೆ ನೀಡುವ ವೀರಾಗ್ರೇಸರನಾದ ಹನುಮಂತನ ಶಕ್ತಿಯ ಸಂಕೇತವಾದ ಹನುಮ ಧ್ವಜವನ್ನು ಗೌರವಿಸುವುದು ನಮ್ಮೆಲ್ಲರ ಮತ್ತು ನಾವು ಚುನಾಯಿಸುವ ಸರ್ಕಾರದ ಕರ್ತವ್ಯವಾಗಿದೆ. ಅದು ಎಲ್ಲೇ ಹಾರಲಿ ಅದಕ್ಕೆ ಹಾನಿಯಾಗದಂತೆ ಸರಕಾರ ಸಂಬಂಧಿತ ಎಲ್ಲಾ ಇಲಾಖೆಗಳಿಗೆ ಆದೇಶ ನೀಡಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದಕ್ಕೂ ಮುನ್ನಾ ವಿಶ್ವ ಹಿಂದು ಪರಿಷತ್ – ಬಜರಂಗದಳ ವತಿಯಿಂದ ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜವನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ಡಿಸಿಸಿ ಬ್ಯಾಂಕ್ ಎದುರುಗಡೆಯ ಶ್ರೀರಾಮ ಮಂದಿರದಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡಲಾಯಿತು.

ಈ ಸಂದರ್ಭದಲ್ಲಿ  ಬಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ಪ್ರಭಜಂನ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪಿ.ರುದ್ರೇಶ್, ಜಿಲ್ಲಾ ಸಹ ಕಾರ್ಯದರ್ಶಿ ಕೇಶವ್, ಬಜರಂಗದಳದ ಜಿಲ್ಲಾ ಸಹ ಸಂಯೋಜಕ ಬಾಲಕೃಷ್ಣ, ವಿಶ್ವ ಹಿಂದೂ ಪರಿಷತ್‌ನ ನಗರ ಸಹ ಕಾರ್ಯದರ್ಶಿ ರಂಗಸ್ವಾಮಿ, ವಿಶ್ವ ಹಿಂದೂ ಪರಿಷತ್ ಗ್ರಾಮಾಂತರ ಅಧ್ಯಕ್ಷ ಶಶಿಧರ್ ಹಾಗೂ ಪ್ರಮುಖರಾದ ವಿಠಲ್, ತೇಜು, ಪ್ರಮೋದ, ರಾಜೇಶ್, ದಿನೇಶ್, ದೀಪಕ್‌ರಾಜ್ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!