ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳದ ರಥಬೀದಿಯಲ್ಲಿ ಭಕ್ತಾದಿಗಳು, ಕ್ಷೇತ್ರದ ಸಮೂಹ ಶಿಕ್ಷಣ ಸಂಸ್ಥೆಗಳ ಎರಡೂವರೆ ಸಾವಿರ ವಿದ್ಯಾರ್ಥಿಗಳೊಂದಿಗೆ ದೇಗುಲದ ಆನೆ ಮಹಾಲಕ್ಷ್ಮೀ ಕೂಡ ಧ್ವಜವಂದನೆಗೈದು ಭಾರತಮಾತೆಗೆ ನಮನ ಸಲ್ಲಿಸಲಾಯಿತು.
ಈಗಾಗಲೇ ಫುಟ್‌ಬಾಲ್, ಕ್ರಿಕೆಟ್ ಆಟ, ನೀರಿನಾಟ ಇತ್ಯಾದಿ ಚಮತ್ಕಾರಗಳಿಂದ ಗಮನ ಸೆಳೆಯುತ್ತಿರುವ ಶ್ರೀ ಕ್ಷೇತ್ರ ಕಟೀಲಿನ ಹೆಣ್ಣಾನೆ ಮಹಾಲಕ್ಷ್ಮೀ, ಮಂಗಳವಾರ ಕಟೀಲು ದೇವಸ್ಥಾನದ ರಥಬೀದಿಯಲ್ಲಿ ಬೆಳಿಗ್ಗೆ ಸ್ವಾತಂತ್ರ್ಯೋತ್ಸವ ಆಚರಣೆ ಪ್ರಯುಕ್ತ ಶಾಲೆಯ ಮಕ್ಕಳೊಂದಿಗೆ ತಾನೂ ಧ್ವಜ ಹಾರಿಸಿ ಸಂಭ್ರಮಿಸಲು ಬಂದು ನಿಂತಂತೆ ಕಾಣುತ್ತಿದ್ದಳು.
ರಥಬೀದಿಯಲ್ಲಿ ನಿವೃತ್ತ ಸೈನಿಕರಾದ ಕಟೀಲು ಲಕ್ಷ್ಮೀನಾರಾಯಣ ರಾವ್ ಧ್ವಜಾರೋಹಣಗೈದರು. ರಾಷ್ಟ್ರಗೀತೆ, ವಂದೇ ಮಾತರಂ, ದೇಶಭಕ್ತಿಗೀತೆಗಳನ್ನು ಹಾಡಿದ ವಿದ್ಯಾರ್ಥಿಗಳು, ವಿಜಯೀ ವಿಶ್ವತೀ ರಂಗಾಪ್ಯಾರಾ ಗೀತೆ ಹಾಡುತ್ತಿದ್ದಂತೆ ಸಹಸ್ರಾರು ವಿದ್ಯಾರ್ಥಿಗಳು ಭಾರತಧ್ವಜಗಳನ್ನು ಎತ್ತಿಹಿಡಿದರು. ಇದೇ ಸಂದರ್ಭ ಆನೆ, ಸೊಂಡಿಲಿನಿಂದ ಬಾವುಟವನ್ನು ಹಾರಾಡಿಸಿತು. ದೇಗುಲದ ಎದುರಿನ ಧ್ವಜಸ್ತಂಭದ ಮುಂದೆ ಸೊಂಡಿಲು, ಕಾಲನ್ನೆತ್ತಿ ನಮಸ್ಕರಿಸಿ ವಂದನೆ ಸಲ್ಲಿಸಿದಾಗ ವಿದ್ಯಾರ್ಥಿಗಳ ಭಾರತ ಮಾತಾಕೀ ಜೈ, ವಂದೇ ಮಾತರಂ ಘೋಷಣೆ ಮುಗಿಲು ಮುಟ್ಟಿತು.
ನಿವೃತ್ತ ಸೈನಿಕರಾದ ನವಾನಂದ ಎಕ್ಕಾರು ದಿಕ್ಸೂಚಿ ಮಾತುಗಳನ್ನಾಡಿದರು. ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಅರ್ಚಕರಾದ ಆಸ್ರಣ್ಣ ಬಂಧುಗಳಾದ ಲಕ್ಷ್ಮೀನಾರಾಯಣ, ವೆಂಕಟರಮಣ, ಅನಂತಪದ್ಮನಾಭ, ಕಮಲಾದೇವೀಪ್ರಸಾದ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಬಿಪಿನ್‌ಚಂದ್ರ ಶೆಟ್ಟಿ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸರೋಜಿನಿ, ಚಂದ್ರಶೇಖರ ಭಟ್, ರಾಜಶೇಖರ್, ಕುಸುಮಾವತಿ, ಡಾ.ಕೃಷ್ಣ ಉಪಸ್ಥಿತರಿದ್ದರು. ಶ್ರೀವತ್ಸ ನಿರೂಪಿಸಿದರು.
ಮಂಗಳವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರನ್ನು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೇಸರಿ ಬಿಳಿ ಹಸುರುಬಣ್ಣದ ಹೂವುಗಳಿಂದ, ಸೀರೆಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದೇಗುಲದ ವತಿಯಿಂದ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಹಾಗೂ ಭಕ್ತಾದಿಗಳಿಗೆ ಲಾಡು ಹಂಚಲಾಯಿತು.