ಬಸ್‍ನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷ ಮೌಲ್ಯದ ಆಭರಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ!

ಹೊಸದಿಗಂತ ವರದಿ, ವಿಜಯಪುರ:

ಪ್ರಯಾಣಿಕರೊಬ್ಬರು ಬಸ್‍ನಲ್ಲಿ ಬಿಟ್ಟು ಹೋಗಿದ್ದ ಅಂದಾಜು 3 ಲಕ್ಷ ಮೌಲ್ಯದ ಚಿನ್ನಾಭರಣದ ಬ್ಯಾಗ್ ಅನ್ನು ಪ್ರಯಾಣಿಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಗುರುವಾರ ಸಂಜೆ ಜಿಲ್ಲೆಯಲ್ಲಿ ನಡೆದಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುದ್ದೇಬಿಹಾಳ ಸಾರಿಗೆ ಘಟಕದ ಚಾಲಕ ಕಂ ನಿರ್ವಾಹಕ ಸಿ.ಆರ್.ಪತ್ತೇಪೂರ ಪ್ರಾಮಾಣಿಕತೆ ಮೆರೆದ ನಿರ್ವಾಹಕ.

ಮುದ್ದೇಬಿಹಾಳ- ನಾಲತವಾಡ- ನಾರಾಯಣಪುರ ತಡೆ ರಹಿತ ಬಸ್‍ಗೆ ಪತ್ತೇಪೂರ ಅವರು ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯದಲ್ಲಿದ್ದರು. ಸಂಜೆ 6 ಗಂಟೆ ಸುಮಾರಿಗೆ ಮುದ್ದೇಬಿಹಾಳದಿಂದ ನಾಲತವಾಡಕ್ಕೆ ಪ್ರಯಾಣಿಸಿದ್ದ ಮಹಿಳಾ ಪ್ರಯಾಣಿಕರೊಬ್ಬರು ಕಿವಿಯೋಲೆ, ಉಂಗುರ, ಬೋರಮಾಳ, ಚೈನ್ ಮುಂತಾದ ಚಿನ್ನದ ಆಭರಣಗಳಿದ್ದ ಬ್ಯಾಗನ್ನು ಸೀಟಿನಲ್ಲೇ ಮರೆತು ಇಳಿದು ಹೋಗಿದ್ದರು. ಸೀಟಿನ ಮೇಲೆ ಇದ್ದ ಬ್ಯಾಗನ್ನು ಗಮನಿಸಿದ ಪತ್ತೇಪೂರ ಅವರು ಯಾರೋ ಪ್ರಯಾಣಿಕರು ಬಿಟ್ಟು ಹೋಗಿರಬಹುದು ಎಂದು ಭಾವಿಸಿ ಅದನ್ನು ಜೋಪಾನವಾಗಿ ತೆಗೆದಿರಿಸಿದ್ದರು.
ಬಸ್ ಮರಳಿ ಮುದ್ದೇಬಿಹಾಳದತ್ತ ಬಂದಾಗ ಬ್ಯಾಗ್ ಬಿಟ್ಟು ಹೋಗಿದ್ದ ಮಹಿಳೆ ಆಫ್ರೀನ್ ನಾಯ್ಕೋಡಿ ತನ್ನ ಪತಿಯ ಸಮೇತ ಇಲ್ಲಿನ ಸಾರಿಗೆ ಘಟಕಕ್ಕೆ ಧಾವಿಸಿ ಬಂದು ಇಂಥ ಬಸ್‍ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದು ಸಿಕ್ಕಿದೆಯೇ ಎಂದು ವಿಚಾರಿಸತೊಡಗಿದ್ದರು. ಆಗ, ಪತ್ತೇಪೂರ ಅವರು ತಮಗೆ ಸಿಕ್ಕ ಬ್ಯಾಗನ್ನು ಘಟಕದ ಭದ್ರತಾ ಸಿಬ್ಬಂದಿ ಮತ್ತು ಸಾರಿಗೆ ನಿರೀಕ್ಷಕರ ಸುಪರ್ದಿಗೆ ಒಪ್ಪಿಸಿದ್ದರು. ಈ ವಿಷಯ ತಿಳಿದ ಪತ್ತೇಪೂರ ಅವರು ಮಹಿಳೆ ಮತ್ತು ಆಕೆಯ ಪತಿಯನ್ನು ಘಟಕದ ಭದ್ರತಾ ಸಿಬ್ಬಂದಿ ಕೊಠಡಿಗೆ ಕರೆದೊಯ್ದು, ಮಹಿಳೆಗೆ ಬ್ಯಾಗ್ ನೀಡಿದ್ದಾರೆ. ಬ್ಯಾಗ್ ಪಡೆದ ಆಫ್ರೀನ್, ತಮ್ಮೆಲ್ಲ ಚಿನ್ನಾಭರಣಗಳನ್ನು ಪರಿಶೀಲಿಸಿ, ಎಲ್ಲ ಸರಿಯಿವೆ, ಮರಳಿಸಿದಕ್ಕೆ ಪತ್ತೇಪೂರ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಘಟಕದ ಸಹಾಯಕ ನಿಯಂತ್ರಕ ವಿಠ್ಠಲ ಲಮಾಣಿ, ಸಾರಿಗೆ ನೌಕರರ ಸಂಘಟನೆಯ ಮುಖಂಡ ಯಮನಪ್ಪ ಹಂಗರಗಿ, ಮಹಿಬೂಬ ನಾಯ್ಕೋಡಿ, ಘಟಕದ ಭದ್ರತಾ ಸಿಬ್ಬಂದಿ, ಸಾರಿಗೆ ಸಿಬ್ಬಂದಿಗಳು ಕಂಡಕ್ಟರ್ ಪತ್ತೇಪೂರ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ‌.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!