ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನ ಅಲಗೇರಿ ವಿಮಾನ ನಿಲ್ದಾಣ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಿತು.
ಅಂಕೋಲಾ ತಾಲೂಕಿನ ಅಲಗೇರಿ, ಭಾವಿಕೇರಿ ಮತ್ತು ಬೆಲೇಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 87 ಎಕರೆ ಜಮೀನಿನಲ್ಲಿ ನೌಕಾನೆಲೆ ಮತ್ತು ನಾಗರಿಕ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಭೂ ಸ್ವಾಧೀನಕ್ಕೆ ಸರ್ಕಾರದಿಂದ ಅನುಮೋದನೆ ದೊರಕಿದ್ದು ಹೆಚ್ಚುವರಿ ಜಮೀನು ಅಗತ್ಯತೆ ಇರುವುದರಿಂದ ಸರ್ವೆ ಕಾರ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ವಿಮಾನ ನಿಲ್ದಾಣ ಯೋಜನೆಗೆ ಜಮೀನು ಮತ್ತು ಮನೆಯನ್ನು ಕಳೆದುಕೊಳ್ಳುತ್ತಿರುವವರಲ್ಲಿ ಹೆಚ್ಚಿನ ಸಂಖ್ಯೆಯ ಜನ ಈಗಾಗಲೇ ನೌಕಾನೆಲೆ ಮತ್ತಿತರ ಯೋಜನೆಗಳಿಂದ ಈ ಮೊದಲು ಸಹ ನಿರಾಶ್ರಿತರಾದವರೇ ಆಗಿದ್ದು ಕೃಷಿ ಭೂಮಿಗಳಲ್ಲಿ ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದಾರೆ.
ಭೂ ಸ್ವಾಧೀನ ಪ್ರಕ್ರಿಯೆಗೆ ಸರ್ಕಾರದಿಂದ ನಿಗದಿ ಮಾಡಿರುವ ಪರಿಹಾರ ಹಣ ತೀರಾ ಕಡಿಮೆಯಾಗಿದ್ದು ಇದರಿಂದಾಗಿ ಭೂಮಿ ಕಳೆದುಕೊಳ್ಳುವವರಿಗೆ ಅನ್ಯಾಯ ಆಗಲಿದೆ ಪರಿಹಾರ ನೀಡುವ ಕುರಿತು ಪರಿಷ್ಕರಣೆ ನಡೆಯಬೇಕಿದೆ ಎಂಬುದು ಭೂಮಿ ಕಳೆದುಕೊಳ್ಳುವವರ ವಾದವಾಗಿದ್ದು ರಾಷ್ಟ್ರೀಯ ಯೋಜನೆಗೆ ತ್ಯಾಗ ಮಾಡುವ ಜನರು ಮೂಲಭೂತ ಸೌಕರ್ಯಗಳೊಂದಿಗೆ ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ನಿರಾಶ್ರಿತರಾಗುವವರು ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದರು.
ಈ ಸಂಬಂಧಿಸಿದಂತೆ ಹಲವು ಬಾರಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ ಶಾಸಕ ಸತೀಶ ಸೈಲ್ ಅವರು ಭೂಮಿ ಕಳೆದುಕೊಳ್ಳುವವರ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸುವ ಭರವಸೆ ನೀಡಿದ್ದರು.
ಇದೀಗ ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ,ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ಅವರೊಂದಿಗೆ ಅಂಕೋಲಾ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಕುರಿತು ಸಭೆ ನಡೆಸಿ ಚರ್ಚೆ ನಡೆಸಿದ್ದು ನಿರಾಶ್ರಿತರ ಪ್ರಮುಖ ಬೇಡಿಕೆಗಳನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿದು ಬಂದಿದೆ.