ಹೊಸದಿಗಂತ ವರದಿ ಶಿವಮೊಗ್ಗ:
ಸಿದ್ದರಾಮಯ್ಯ ಸಂಪುಟದಲ್ಲಿ ಆರೋಪ ಕೇಳಿ ಬರುತ್ತಿರುವ ಮೂವರು ಸಚಿವರ ರಾಜೀನಾಮೆಯನ್ನು ಈ ಕೂಡಲೇ ಪಡೆಯಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಚಿವ ಭೈರತಿ ಸುರೇಶ್ ಆಪ್ತರು ನಕಲಿ ಆಧಾರ್ ಕಾರ್ಡ್, ನಕಲಿ ಚುನಾವಣಾ ಗುರುತಿನ ಚೀಟಿ, ನಕಲಿ ಪಾನ್ ಕಾರ್ಡ್‌ಗಳನ್ನು ಸಿದ್ಧ ಮಾಡುತ್ತಿದ್ದ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸಿಸಿಬಿ ಪೊಲೀಸರು ಈಗಾಗಲೇ ಮೂವರು ಭೈರತಿ ಸುರೇಶ್ ಅವರ ಆಪ್ತರನ್ನು ಬಂಧಿಸಿದ್ದಾರೆ. ಈ ಮಾಹಿತಿ ಸಚಿವರಿಗೆ ಗೊತ್ತಿದ್ದರೆ ತಕ್ಷಣ ಅವರು ರಾಜೀನಾಮೆ ಕೊಡಬೇಕು. ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಶರಣಪ್ರಕಾಶ್ ಪಾಟೀಲ್ ಮೇಲೆ ಈಗಾಗಲೇ ಬಿಜೆಪಿ ಕಾರ್ಯಕರ್ತ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಪ್ರಕರಣದಲ್ಲಿ ಗುತ್ತಿಗೆದಾರ ಹೇಳಿದ್ದಾನೆ ಎನ್ನಲಾದ ಟೈಪ್ ಮಾಡಿದ ಕಾಗದ ಸಿಕ್ಕಿತ್ತು. ಅಷ್ಟಕ್ಕೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಲ್ಲಾ ಸೇರಿ ದೊಡ್ಡ ಮೆರವಣಿಗೆ ಮಾಡಿದ್ದರು. ಅಷ್ಟರಲ್ಲೇ ಪಕ್ಷದ ನಾಯಕರಿಗೆ ರಾಜೀನಾಮೆ ಕೊಡುತ್ತೇನೆ ಎಂದು ನಾನೇ ಹೇಳಿದ್ದೆ. ಕೊನೆಗೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ, ಎಲ್ಲದರಿಂದ ಮುಕ್ತನಾಗಿದ್ದೇನೆ.
ಈಗ ಶರಣಪ್ರಕಾಶ್ ಪಾಟೀಲ್ ಮೇಲೆ ಬಿಜೆಪಿ ಕಾರ್ಯಕರ್ತ ಆರೋಪ ಮಾಡಿರುವ ಆಡಿಯೋ ಕೂಡ ಸಿಕ್ಕಿದೆ. ಹಾಗಾಗಿ ಅವರಿಂದ ತಕ್ಷಣ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಇನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ತನಿಖೆ ನಡೆಸಲು ಹೈಕೋರ್ಟ್ ಸಿಬಿಐಗೆ ಸೂಚನೆ ನೀಡಿದೆ. ಇನ್ನು ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಕೂಡ ಹೇಳಿದೆ. ಹಾಗಾಗಿ ಡಿಕೆಶಿ ಕೂಡ ಡಿಸಿಎಂ ಹುದ್ದೆ ಮತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಿಂದ ಇವರನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.