ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ಆಟ ಒಂದು ಕುಟುಂಬವನ್ನು ಬಲಿತೆಗೆದುಕೊಂಡ ಘಟನೆ ಯಾದಾದ್ರಿ-ಭುವನಗಿರಿ ಜಿಲ್ಲೆಯ ಚೌಟುಪ್ಪಲಿನ ಮಲ್ಲಿಕಾರ್ಜುನ ನಗರದಲ್ಲಿ ನಿನ್ನೆ (ಮಂಗಳವಾರ) ಸಂಜೆ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಾಲಿಗೊಂಡ ಮಂಡಲದ ಗೊಳ್ನೆಪಲ್ಲಿಯ ಅವಿಶೆಟ್ಟಿ ಮಲ್ಲೇಶ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಆತನ ಪತ್ನಿ ರಾಜೇಶ್ವರಿ ಮತ್ತು ಮಕ್ಕಳಾದ ಅನಿರುದ್ಧ ಮತ್ತು ಹರ್ಷವರ್ಧನ್ ಅವರೊಂದಿಗೆ ಚೌಟುಪ್ಪಲ್‌ನಲ್ಲಿ ವಾಸಿಸುತ್ತಿದ್ದರು. ಒಂದು ವರ್ಷದಿಂದ ಆನ್‌ಲೈನ್‌ನಲ್ಲಿ ಆಟ ಆಡುತ್ತಿದ್ದ ರಾಜೇಶ್ವರಿ ಸುಮಾರು 8 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು.
ಈ ಆಟಕ್ಕಾಗಿ ಪರಿಚಿತರು ಮತ್ತು ಸಂಬಂಧಿಕರಿಂದ ಹಣವನ್ನು ಸಾಲ ತೆಗೆದುಕೊಂಡಿದ್ದು, ಕೊಟ್ಟ ಹಣ ವಾಪಸ್ ಕೊಡುವಂತೆ ಸಾಲಗಾರರು ಬೆನ್ನು ಬಿದ್ದರು. ನಿನ್ನೆ ಸಂಜೆ ಹಣ ನೀಡುವಂತೆ ಹತ್ತಿರದ ಸಂಬಂಧಿಯೊಬ್ಬರು ಮನೆಗೆ ಬಂದಿದ್ದರು. ಜಮೀನು ಮಾರಿ ಸಾಲ ತೀರಿಸುವುದಾಗಿ ಹೇಳಿದರೂ ಕೇಳಲಿಲ್ಲ. ಈ ಘಟನೆಯಿಂದ ಅವಮಾನಿತಳಾದ ರಾಜೇಶ್ವರಿ ತನ್ನ ಇಬ್ಬರು ಗಂಡು ಮಕ್ಕಳನ್ನು ಮನೆ ಆವರಣದಲ್ಲಿರುವ ನೀರಿನ ಸಂಪಿಗೆ ಎಸೆದು ತಾನೂ ಜಿಗಿದಿದ್ದಾಳೆ.
ರಾತ್ರಿ ಏಳು ಗಂಟೆಗೆ ಮಲ್ಲೇಶ್ ಮನೆಗೆ ಬಂದಾಗ ಹೆಂಡತಿ ಮಕ್ಕಳು ಕಾಣಲಿಲ್ಲ. ಮನೆ ಮುಂಭಾಗದ ಸಂಪು ಮುಚ್ಚಳ ತೆರೆದಿದ್ದರಿಂದ ಅನುಮಾನಗೊಂಡು ನೋಡಿದರು. ಕೂಡಲೇ ಮೂವರನ್ನು ಹೊರ ತೆಗೆದು ಚೌಟಯ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೂವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.