ಕ್ವಿಟ್ ಇಂಡಿಯಾ ಚಳುವಳಿ ವೇಳೆ ಬ್ರಿಟೀಷರಿದ್ದ ರೈಲನ್ನೇ ಸ್ಫೋಟಿಸಿದ್ದ ಧೀರನೀತ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ತಾಳಿಸೆಟ್ಟಿ ವೆಂಕಟಾಚಲಪತಿ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ ಕ್ರಾಂತಿಕಾರಿ. ಶ್ರೀಕಾಳಹಸ್ತಿ ಪಟ್ಟಣದ ಬಹದ್ದೂರಪೇಟೆಯ ಸರಳ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ತೀವ್ರಗಾಮಿ ಚಟುವಟಿಕೆಗಳ ಮೂಲಕ ಕ್ರಾಂತಿಕಾರಿ ನಾಯಕರಾಗಿ ಗುರುತಿಸಿಕೊಂಡರು.
ಹೋರಾಟದ ಪ್ರಾರಂಭಿಕ ದಿನಗಳಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಂಗುಟೂರಿ ಪ್ರಕಾಶಂ ಪಂತುಲು ಅವರ ನಿಕಟ ಅನುಯಾಯಿಯಾಗಿ ಗುರುತಿಸಿಕೊಂಡರು. 1929 ನೇ ಇಸವಿಯ ಮೇ ತಿಂಗಳಲ್ಲಿ ಮಹಾತ್ಮಾ ಗಾಂಧಿಯವರು ವಿದೇಶಿ ಬಟ್ಟೆ ಬಹಿಷ್ಕಾರಕ್ಕೆ ಬೆಂಬಲವನ್ನು ಸಂಗ್ರಹಿಸಲು ಆಂಧ್ರದ ಶ್ರೀಕಾಳಹಸ್ತಿ, ಮದನಪಲ್ಲಿ ಮತ್ತು ಪುಂಗನೂರು ಪಟ್ಟಣಗಳಲ್ಲಿ ಪ್ರವಾಸ ಮಾಡಿದಾಗ, ವೆಂಕಟಾಚಲಪತಿಯವರು ಶ್ರೀಕಾಳಹಸ್ತಿಯ ಸ್ವರ್ಣಮುಖಿ ನದಿಯ ದಡದಲ್ಲಿ ವಿದೇಶಿ ಬಟ್ಟೆಗಳನ್ನು ಸಾಮೂಹಿಕವಾಗಿ ಸುಡುವ ವ್ಯವಸ್ಥೆ ಮಾಡಿದರು.
ಕ್ವಿಟ್ ಇಂಡಿಯಾ ಚಳುವಳಿ ತೀವ್ರತೆ ಪಡೆದಿದ್ದ 1933-1944 ರ ಅವಧಿಯಲ್ಲಿ ಸಹ ಸ್ವಾತಂತ್ರ್ಯ ಹೋರಾಟಗಾರ ಪಿ. ಸುಬ್ಬರಾಮ ದಾಸು ಅವರೊಂದಿಗೆ ಸೇರಿ ಅಕ್ಕುರ್ತಿ ರೈಲು ನಿಲ್ದಾಣದಲ್ಲಿ ಬ್ರಿಟಿಷ್ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಧ್ವಂಸ ಮಾಡಿದರು. ಈ ಘಟನೆಯಿಂದ ಕೆಂಡಾಮಂಡಲರಾದ ಬ್ರಟೀಷರು ವೆಂಕಟಾಚಲಪತಿ ಅವರನ್ನು ಬಂಧಿಸಿ ಮೂರು ವರ್ಷಗಳ ಸೆರೆವಾಸ ವಿಧಿಸಿದರು. ಸ್ವಾತಂತ್ರ್ಯ ಹೋರಾಟ ತೀವ್ರವಾಗಿದ್ದ ದಿನಗಳಲ್ಲಿ ಅವರು ಜೈಲಿನಲ್ಲಿ ಕಳೆಯಬೇಕಾಯ್ತು.
ವೆಂಕಟಾಚಲಪತಿ ಹೋರಾಟಕ್ಕೆ ವಿಚಾರಕ್ಕೆ ಬಂದರೆ ಎಷ್ಟು ಕೋಪಿಷ್ಠರೋ ಅಂತರಾಳದಲ್ಲಿ ಅಷ್ಟೇ ಸಂವೇದನಾಶೀಲ ವ್ಯಕ್ತಿಯಾಗಿದ್ದರು. ಅವರು ಸಮಾನತೆಯ ಸಮಾಜದ ಕನಸು ಕಂಡಿದ್ದರು. ಅದಕ್ಕಾಗಿ ಹರಿಜನ ಸೇವಾ ಸೊಸೈಟಿಯನ್ನು ಸ್ಥಾಪಿಸಿದರು. ಜೊತೆಗೆ ದಲಿತರ ದೇವಾಲಯ ಪ್ರವೇಶಕ್ಕಾಗಿ ಹೋರಾಟ ನೆಸಿದರು. ಸ್ವಾತಂತ್ರ್ಯದ ನಂತರ ಹರಿಜನರ ಶ್ರೇಯೋಭಿವೃದ್ಧಿಗಾಗಿ ಚರ್ಮದ ಘಟಕವೊಂದನ್ನು ಸ್ಥಾಪಿಸಿದರು.
ಸ್ವಾತಂತ್ರ್ಯದ ನಂತರ, ವೆಂಕಟಾಚಲಪತಿ ಅವರು ಮದ್ರಾಸಿಗೆ ತೆರಳಿ ಶಿಕ್ಷಕ ವೃತ್ತಿ ನಡೆಸಿದರು. ಕೆಲ ವರ್ಷಗಳ ನಂತರ ಕಾಳಹಸ್ತಿಗೆ ಹಿಂತಿರುಗಿ, ದಲಿತ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಒಂದನ್ನು ಪ್ರಾರಂಭಿಸಿದರು. ಅವರು 2002 ರಲ್ಲಿನಿಧನರಾಗುವವರೆಗೂ ಅದನ್ನು ಮುನ್ನಡೆಸುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!