ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ವರ್ಷದ ಆಸುಪಾಸಿನ ಕಂದಮ್ಮಗಳು ಅಂಗನವಾಡಿಗೆ ಬಂದು ಆಟವಾಡುವಾಗ ಇದ್ದಕ್ಕಿದ್ದಂತೆಯೇ ಜೇನುನೊಣಗಳು ದಾಳಿ ಮಾಡಿದ್ರೆ?
ಎದೆ ಝಲ್ ಎನ್ನುತ್ತದೇ ಅಲ್ಲವೇ? ನಮ್ಮದೇ ಮಕ್ಕಳಿರುವ ಶಾಲೆಯಲ್ಲಿ ಈ ರೀತಿ ಘಟನೆ ನಡೆದಿದ್ರೆ? ಭೋಪಾಲ್‌ನ ಅಂಗನವಾಡಿಯೊಂದರಲ್ಲಿ ಮಕ್ಕಳ ಮೇಲೆ ಜೇನುನೊಣಗಳು ಅಟ್ಯಾಕ್ ಮಾಡಿದ್ದು, ಅಂಗನವಾಡಿ ಅಡುಗೆಯವರ ತ್ಯಾಗದಿಂದ ಮಕ್ಕಳ ಪ್ರಾಣ ಉಳಿದಿದೆ.
ಭೋಪಾಲ್‌ನ ರಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ, ಮಕ್ಕಳು ಆವರಣದಲ್ಲಿ ಆಡುವಾಗ ಜೇನು ದಾಳಿ ಮಾಡಿದೆ. ಅಂಗನವಾಡಿ ಸಹಯಾಕಿ ಕಾಂಚನ್ ಬಾಯಿ ಮೇಘವಾಲ್ ಏನನ್ನೂ ಯೋಚಿಸದೆ ಮಕ್ಕಳ ಪ್ರಾಣ ಉಳಿಸಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ.
ಅಕ್ಕಪಕ್ಕ ಇದ್ದ ಕಂಬಳಿ, ಟಾರ್ಪಲ್‌ನ್ನು ಎತ್ತಿಕೊಂಡು ಮಕ್ಕಳನ್ನು ರಕ್ಷಿಸಿ, ಸ್ಕೂಲ್ ಒಳಕ್ಕೆ ಕಳಿಸಿದ್ದಾರೆ. ಈ ವೇಳೆ ಮಕ್ಕಳಿಗೆ ಜೇನುನೊಣ ಕಚ್ಚಿಲ್ಲ ಆದರೆ ಕಾಂಚನ್ ಅವರಿಗೆ ನೂರಾರು ನೊಣಗಳು ಕಚ್ಚಿವೆ. ಗ್ರಾಮಸ್ಥರು ಸಹಾಯಕ್ಕೆ ಬರುವುದರೊಳಗೆ ಕಾಂಚನ್ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ವ್ಯದ್ಯರು ಘೋಷಣೆ ಮಾಡಿದ್ದಾರೆ.
ಪಾರ್ಶ್ವವಾಯು ಇರುವ ಪತಿ, ಮಗ ಹಾಗೂ ಇಬ್ಬರು ಮಕ್ಕಳನ್ನು ಕಾಂಚನ್ ಸಾಕಿ ಸಲಹುತ್ತಿದ್ದರು. ಕಾಂಚನ್ ನಿಧನದಿಂದ ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ. ಮಕ್ಕಳನ್ನು ಬದುಕಿಸಲು ತನ್ನ ಪ್ರಾಣ ತೆತ್ತ ಮಹಾತಾಯಿ ಸಾವಿಗೆ ಇಡೀ ದೇಶವೇ ಮರುಗುತ್ತಿದೆ.



