ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಸಂಚಲನ ಮೂಡಿಸಿದ್ದ ಉತ್ತರಾಖಂಡದ ರೆಸಾರ್ಟ್ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಭಾಗವಾಗಿ ಆರೋಪಿಗಳನ್ನು ಪೊಲೀಸರು ನಾರ್ಕೋ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದ್ದು, ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದ್ದಾರೆ. ಉತ್ತರಾಖಂಡದ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿರುವ ಅಂಕಿತಾ ಭಂಡಾರಿ ಅವರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಲು ಮಾಲೀಕರು, ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಪ್ರಯತ್ನಿಸಿದ್ದು, ಆಕೆ ನಿರಕಾರಿಸಿದಳು ಎಂಬ ಕಾರಣಕ್ಕೆ ಆಕೆಯನ್ನು ಸ್ಥಳೀಯ ಕಾಲುವೆ ಬಳಿ ಕರೆದೊಯ್ದು ಹತ್ಯೆ ಮಾಡಿದ್ದಾರೆ.
ಆಕೆಯ ಶವ ಪತ್ತೆಯಾದಾಗ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಪ್ರಮುಖ ಆರೋಪಿ ಎಂದು ಗುರುತಿಸಿದ್ದಾರೆ. ಅಲ್ಲದೇ ಈ ಕೊಲೆಯಲ್ಲಿ ರೆಸಾರ್ಟ್ ಮ್ಯಾನೇಜರ್ ಸೇರಿದಂತೆ ಬೇರೆಯವರ ಪಾತ್ರವಿದೆ ಎಂಬುದನ್ನು ಪೊಲೀಸರು ಕಂಡುಕೊಂಡರು. ಪ್ರಸ್ತುತ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಪುಲ್ಕಿತ್ ಆರ್ಯ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಪುತ್ರ. ಕಳೆದ ಸೆಪ್ಟೆಂಬರ್ 18 ರಂದು ಅಂಕಿತಾ ಕೊಲೆಯಾಗಿದ್ದು, ಅದೇ ತಿಂಗಳ 24 ರಂದು ಆಕೆಯ ಶವ ಪತ್ತೆಯಾಗಿತ್ತು.
ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಪ್ರಮುಖ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಆದಾಗ್ಯೂ, ಪೊಲೀಸರು ಇನ್ನಷ್ಟು ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸುವ ಸಲುವಾಗಿ ಆರೋಪಿಗಳಿಗೆ ನಾರ್ಕೋ ಪರೀಕ್ಷೆಯನ್ನು ನಡೆಸಲು ಬಯಸಿದ್ದರು. ಇದಕ್ಕಾಗಿ ಈಗಾಗಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯದ ಅನುಮತಿ ದೊರೆತ ನಂತರ ಆರೋಪಿಗಳಿಗೆ ನಾರ್ಕೋ ಪರೀಕ್ಷೆ ನಡೆಸಲಾಗುವುದು.