August 30, 2026
Sunday, August 30, 2026
spot_img

ಅಂಕೋಲಾ ಪೊಲೀಸರ ‘ಗಾಂಜಾ’ ಬೇಟೆ: ಅಮಲಿನಲ್ಲಿ ತೇಲುತ್ತಿದ್ದ ಯುವಕ ಈಗ ಕಂಬಿ ಹಿಂದೆ

ಹೊಸದಿಗಂತ ಅಂಕೋಲಾ:

ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಯುವಜನತೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಗಾಂಜಾ ಜಾಲದ ವಿರುದ್ಧ ಅಂಕೋಲಾ ಪೊಲೀಸರು ಸಮರ ಸಾರಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾ ಸೇವಿಸಿ ಅಮಲಿನಲ್ಲಿ ತೂರಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ವಂದಿಗೆ ನಿವಾಸಿ ರಜತ ಮಂಜುನಾಥ ನಾಯಕ (24) ಬಂಧಿತ ಆರೋಪಿ. ಪಟ್ಟಣದ ಹುಲಿದೇವರವಾಡದ ಬಳಿಯ ಎ.ಪಿ.ಎಂ.ಸಿ (APMC) ಮೈದಾನದಲ್ಲಿ ಈತ ಸಂಶಯಾಸ್ಪದವಾಗಿ ಓಡಾಡುತ್ತಿದ್ದನು. ಈತನ ಬಾಯಿಯಿಂದ ಗಾಂಜಾದ ಘಾಟು ವಾಸನೆ ಬರುತ್ತಿರುವುದನ್ನು ಗಮನಿಸಿದ ಪಿ.ಎಸ್.ಐ ಗುರುನಾಥ ಹಾದಿಮನಿ ಅವರು ತಕ್ಷಣ ವಿಚಾರಣೆ ನಡೆಸಿದ್ದಾರೆ.

ಪೊಲೀಸರ ಖಡಕ್ ವಿಚಾರಣೆಗೆ ಬೆದರಿದ ಯುವಕ ತಾನು ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೂಡಲೇ ಆತನನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ರಾಷ್ಟ್ರೀಯ ಹೆದ್ದಾರಿ 66ರ ಸುತ್ತಮುತ್ತಲಿನ ನಿರ್ಜನ ಪ್ರದೇಶಗಳು ಹಾಗೂ ಫ್ಲೈ ಓವರ್‌ಗಳ ಕೆಳಭಾಗ ಗಾಂಜಾ ವ್ಯಸನಿಗಳ ಅಡ್ಡಾವಾಗುತ್ತಿದೆ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಕೆಲವೇ ದಿನಗಳ ಹಿಂದೆ ಜಿ.ಸಿ. ಕಾಲೇಜು ಫ್ಲೈ ಓವರ್ ಬಳಿಯೂ ಇಂತದ್ದೇ ಕಾರ್ಯಾಚರಣೆ ನಡೆಸಿ ಒಬ್ಬನನ್ನು ಬಂಧಿಸಲಾಗಿತ್ತು. ಸದ್ಯ ಅಂಕೋಲಾ ಪೊಲೀಸರ ಈ ಸತತ ಕಾರ್ಯಾಚರಣೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !