ಅಂಕೋಲಾ: ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಮಣ್ಣು ಸಂಗ್ರಹ

ಹೊಸದಿಗಂತ ವರದಿ, ಅಂಕೋಲಾ:
ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿಯ ಪ್ರತಿಮೆ ಅನಾವರಣದ ಸ್ಥಳದಲ್ಲಿ ಗೋಪುರ ನಿರ್ಮಾಣಕ್ಕಾಗಿ ನಾಡಿನೆಲ್ಲೆಡೆ ಮಣ್ಣು ಸಂಗ್ರಹ ಅಭಿಯಾನ ನಡೆಯುತ್ತಿದೆ. ಅದರಂತೆ ಅಂಕೋಲಾಕ್ಕೆ ಆಗಮಿಸಿದ ʼಬನ್ನಿ ನಾಡ ಕಟ್ಟೋಣʼ ಐತಿಹಾಸಿಕ ರಥಕ್ಕೆ ತಾಲೂಕಿನಲ್ಲಿ ಸ್ವಾಗತಿಸಿ, ಸ್ವಾತಂತ್ರ್ಯ ಹೋರಾಟದ ಪುಣ್ಯ ಭೂಮಿ- ಜಾಗೃತ ಸ್ಥಾನ ಎಂದು ಖ್ಯಾತಿ ಪಡೆದಿರುವ ಅಂಕೋಲೆಯ ಪವಿತ್ರ ಮಣ್ಣನ್ನು ನೀಡಲಾಯಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ ಅವರು ಅಭಿಯಾನದ ರಥಕ್ಕೆ ತಾಲೂಕಿನ ಶಕ್ತಿ ದೇವತೆ ಶ್ರೀ ಶಾಂತಾದುರ್ಗಾ ದೇವಾಲಯದ ಆವರಣ ಮತ್ತು ಶ್ರೀ ಲಕ್ಷ್ಮೀ ನಾರಾಯಣ ಮಹಾಮಾಯಾ ದೇವಾಲಯದ ಆವರಣದಲ್ಲಿ ಸಂಗ್ರಹಿಸಲಾದ
ಮಣ್ಣನ್ನು ಅರ್ಪಿಸಿದರು.
ತಾಲೂಕಿಗೆ ಆಗಮಿಸಿದ ಅಭಿಯಾನ ರಥವನ್ನು ಪಟ್ಟಣದ ಪ್ರವೇಶ ದ್ವಾರದಲ್ಲಿ ತಹಶೀಲ್ಧಾರ ಉದಯ ಕುಂಬಾರ ಮತ್ತಿತರ ಅಧಿಕಾರಿಗಳು ಗೌರವಪೂರ್ವಕವಾಗಿ ಸ್ವಾಗತಿಸಿದರು. ಜಾಂಜ್ ವಾದ್ಯ, ಹಾಲಕ್ಕಿಗಳ ಸಾಂಪ್ರದಾಯಿಕ ಗುಮಟೆ ವಾದನ, ವಿವಿಧ ರೂಪಕ,ಅಂಗನವಾಡಿ ಕಾರ್ಯಕರ್ತೆಯರ ಪೂರ್ಣಕುಂಭ ಗೌರವದೊಂದಿಗೆ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನಕ್ಕೆ ಆಗಮಿಸಿದ ಅಭಿಯಾನ ರಥದಲ್ಲಿ ನಾಡಪ್ರಭು ಕೆಂಪೇಗೌಡರ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಉಪಾಧ್ಯಕ್ಷೆ ರೇಖಾ ಗಾಂವಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ,ತಾಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ಪಿ.ವೈ.ಸಾವಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್, ಕ.ಸಾ.ಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಲಯನ್ಸ್ ಕ್ಲಬ್ ಅಧ್ಯಕ್ಷ ಗಣೇಶ ಶೆಟ್ಟಿ, ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಮೀನುಗಾರಿಕೆ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜ, ಹಾಲಕ್ಕಿ ಸಮಾಜದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಜೈಹಿಂದ್ ಹೈಸ್ಕೂಲ್ ಮುಖ್ಯಾಧ್ಯಾಪಕ ಪ್ರಭಾಕರ ಬಂಟ, ಪಿ.ಎಂ.ಹೈಸ್ಕೂಲ್ ಎನ್. ಸಿ.ಸಿ ಕಮಾಂಡರ್ ಗಣಪತಿ ತಾಂಡೇಲ್ ಮೊದಲಾದವರು ಉಪಸ್ಥಿತರಿದ್ದರು.
ಅಭಿಯಾನ ರಥ ತಾಲೂಕಿನ ಅವರ್ಸಾ ಮತ್ತು ಹಟ್ಟಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿ ಅಲ್ಲಿನ ಮಣ್ಣು ಸಂಗ್ರಹಿಸಲಾಯಿತು.

ʼನಾಡ ಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕನ್ನಡಿಗರಿಗೆ ಹೆಮ್ಮೆಯ ವಿಷಯ ಒಂದು ಉತ್ತಮ ಕೆಲಸದಲ್ಲಿ ಅಂಕೋಲೆಯ ಮಣ್ಣು ಸಹ ಉಪಯೋಗವಾಗಲಿರುವುದು ತುಂಬಾ ಸಂತೋಷದ ಸಂಗತಿʼ.
 .ತುಳಸಿ ಗೌಡ, ಪದ್ಮಶ್ರೀ ಪುರಸ್ಕೃತೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!