ಹೊಸದಿಗಂತ ಡಿಜಿಟಲ್ ಡೆಸ್ಕ್:
ಐದು ರೂಪಾಯಿಗೆ ಊಟ ಸಿಗುವ ಅನ್ನ ಕ್ಯಾಂಟೀನ್ ಮತ್ತೆ ಆರಂಭವಾಗಿದೆ. ಹೌದು, ಆಂಧ್ರಪ್ರದೇಶದಲ್ಲಿ ಕ್ಯಾಂಟೀನ್ ಪುನರಾರಂಭವಾಗಿದ್ದು, ಬಡವರ ಮೊಗದಲ್ಲಿ ಸಂತಸ ಅರಳಿದೆ. ಐದು ರೂಪಾಯಿ ಪಾವತಿಗೆ ಹೊಟ್ಟೆ ತುಂಬಾ ಇಲ್ಲಿ ಊಟ ಮಾಡಬಹುದಾಗಿದೆ.
ಟಿಡಿಪಿಯ ಹಿಂದಿನ ಆಡಳಿತದಲ್ಲಿ ಪ್ರಾರಂಭಿಸಲಾದ ಕ್ಯಾಂಟೀನ್‌ಗಳನ್ನು ವೈಎಸ್‌ಆರ್‌ಸಿಪಿ ಸರ್ಕಾರವು 2019 ಮತ್ತು 2024 ರ ನಡುವೆ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಅಧಿಕಾರದಲ್ಲಿರುವ ಟಿಡಿಪಿ ಈ ಕ್ಯಾಂಟೀನ್‌ಗಳನ್ನು ಮರುಪ್ರಾರಂಭಿಸಿದೆ. ಗುಡಿವಾಡದಲ್ಲಿ ಅನ್ನ ಕ್ಯಾಂಟೀನ್‌ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಬಡವರು ಹಸಿವಿನಿಂದ ಬಳಲಬಾರದು ಎಂಬುದು ಈ ಕ್ಯಾಂಟೀನ್‌ಗಳ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಅನ್ನ ಕ್ಯಾಂಟೀನ್‌ನ ಊಟಕ್ಕೆ 5 ರೂ. ಬಡವರಿಗೆ, ದಿನಗೂಲಿದಾರರಿಗೆ ಮತ್ತು ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ‘ಬಡವರ ಖಾಲಿ ಹೊಟ್ಟೆಯನ್ನು ತುಂಬಿಸುವುದಕ್ಕಿಂತ ತೃಪ್ತಿಕರವಾದ ಮತ್ತೊಂದು ಕೆಲಸ ಯಾವುದಿದೆ’ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಜಗನ್ ಮೋಹನ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.