ಬಿಜೆಪಿಯಲ್ಲಿ ಅಣ್ಣ, ಸಾಂಬಾರ್‌ನಲ್ಲಿ ಕರಿಬೇವಿನ ಎಲೆಯಂತೆ: ಅನಿಲ್ ಆಂಟನಿ ಸಹೋದರ ಟೀಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿರಿಯ ಕಾಂಗ್ರೆಸ್‌ ನಾಯಕ ಎಕೆ ಆಂಟಿ ಪುತ್ರ ಅನಿಲ್ ಆಂಟನಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಒಂದು ದಿನದ ನಂತರ, ಎಕೆ ಆಂಟನಿ ಅವರ ಕಿರಿಯ ಪುತ್ರ ಅಜಿತ್ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಅಣ್ಣ ಸಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರವಿದೆ. ಆದರೆ, ಕೇಸರಿ ಪಕ್ಷವು ಅವರನ್ನು ಸಾಂಬಾರ್‌ನಲ್ಲಿ ಬಳಸುವ ಕರಿಬೇವಿನೆ ಎಲೆಯಂತೆ, ತಾತ್ಕಾಲಿಕವಾಗಿ ಬಳಸಿಕೊಂಡು ಎತ್ತಿ ಹೊರಹಾಕುತ್ತದೆ ಎಂದಿದ್ದಾರೆ.

ತಿರುವನಂತಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಜಿತ್‌ ಆಂಟನಿ, ತಮ್ಮ ನಿರ್ಧಾರದ ಬಗ್ಗೆ ಇಡೀ ಕುಟುಂಬಕ್ಕೆ ಒಂದೇ ಒಂದು ಸಣ್ಣ ಸೂಚನೆಯನ್ನೂ ನೀಡಲಿಲ್ಲ. ಗುರುವಾರ ಅಣ್ಣ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಟಿವಿಗಳಲ್ಲಿ ಬ್ರೇಕಿಂಗ್‌ ನ್ಯೂಸ್‌ ಆಗಿ ಬರುವಾಗ ನಮಗೆಲ್ಲರಿಗೂ ಆಘಾತವಾಗಿತ್ತು ಎಂದು ಹೇಳಿದ್ದಾರೆ.

ದೆಹಲಿಯಲ್ಲಿರುವ ತಮ್ಮ ಕೇಂದ್ರ ಕಚೇರಿಯಲ್ಲಿ ಅನಿಲ್ ಬಿಜೆಪಿ ಸದಸ್ಯತ್ವವನ್ನು ಸ್ವೀಕರಿಸಿದ್ದನ್ನು ನೋಡಿದ ನಂತರ ತಂದೆ ಬಹಳ ಆಘಾತಗೊಂಡಿದ್ದಾರೆ ಎಂದು ಅಜಿತ್‌ ತಿಳಿಸಿದ್ದಾರೆ. ‘ಅಣ್ಣ ಬಿಜೆಪಿಗೆ ಸೇರಿದ ಬಳಿಕ, ಪಪ್ಪ (ಎಕೆ ಆಂಟನಿ) ಮನೆಯ ಮೂಲೆಯೊಂದರಲ್ಲಿ ಬಹಳ ನೋವಿನಿಂದ ಕುಳಿತುಕೊಂಡಿದ್ದರು. ನನ್ನ ಜೀವನನ್ನು ನಾನು ಅವರನ್ನು ಆ ರೀತಿ ದುಬರ್ಲವಾಗಿ ನೋಡಿರಲಿಲ್ಲ. ಅವರು ಕಣ್ಣೀರು ಮಾತ್ರ ಹಾಕಿರಲಿಲ್ಲ’ ಎಂದಿದ್ದಾರೆ.

ಅಣ್ಣ ಬಿಜೆಪಿಗೆ ಸೇರಲು ತನ್ನದೇ ಆದ ವೈಯಕ್ತಿಕ ಕಾರಣಗಳನ್ನು ಹೊಂದಿದ್ದ. ಕಾಂಗ್ರೆಸ್‌ ಪಕ್ಷದ ಅಪರಿಚಿತ ಕಾರ್ಯಕರ್ತರಿಂದ ಅವರಿಗೆ ನಿಂದನೆಯ ಕರೆಗಳು ಬರುತ್ತಿದ್ದವು. ಇದು ಅವರಿಗೆ ನೋವುಂಟು ಮಾಡಿತ್ತು. ಆತ ಸಿಟ್ಟಿನಿಂದ ಕಾಂಗ್ರೆಸ್‌ ಪಕ್ಷದಿಂದ ದೂರ ಉಳಿಯಬಹುದು ಎಂದು ಯೋಚನೆ ಮಾಡಿದ್ದೆ. ಆದರೆ, ನಾನೆಂದೂ ಆತ ಬಿಜೆಪಿ ಸೇರಬಹುದು ಎನ್ನುವ ಯೋಚನೆಯನ್ನೇ ಮಾಡಿರಲಿಲ್ಲ. ಆದರೆ, ಈ ನಿರ್ಧಾರ ನನಗೆ ಬಹಳ ಅಚ್ಚರಿ ನೀಡಿದೆ’ ಎಂದು ಅಜಿತ್‌ ತಿಳಿಸಿದ್ದಾರೆ.

ಇನ್ನು ಅನಿಲ್‌ ಬಿಜೆಪಿಗೆ ಸೇರಿದ್ದು ಸಿಟ್ಟಿನ ನಿರ್ಧಾರ ಎಂದಿರುವ ಅಜಿತ್‌, ತನ್ನ ತಪ್ಪುಗಳು ಅರ್ಥವಾದ ಬಳಿಕ ಮತ್ತೊಮ್ಮೆ ಅವರು ಕಾಂಗ್ರೆಸ್‌ ಪಕ್ಷಕ್ಕೆ ವಾಪಸಾಗಲಿದ್ದಾರೆ ಎಂದು ಹೇಳಿದರು. ಆತನ ರಾಜಕೀಯ ಭವಿಷ್ಯಕ್ಕೆ ಬಿಜೆಪಿಯೇ ಉತ್ತಮ ಎಂದು ಅವರು ಭಾವಿಸಿದರೆ, ಬಿಜೆಪಿಯಲ್ಲಿಯೇ ಉಳಿಯಬಹುದು ಎಂದಿದ್ದಾರೆ. ‘ನಾನು ಪದೇ ಪದೇ ಇದನ್ನೇ ಹೇಳುತ್ತೇನೆ. ಖಂಡಿತವಾಗಿ ಬಿಜೆಪಿ ನನ್ನ ಅಣ್ಣನನ್ನು ಕರಿಬೇವಿನ ಎಲೆಯ ರೀತಿ ಉಪಯೋಗಿಸಿಕೊಂಡು ಎಸೆಯಲಿದೆ ಎಂದು ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಬಿಜೆಪಿ ಸೇರಿದ ಅಲ್ಫೋನ್ಸ್ ಕಣ್ಣಂತಾನಂ ಮತ್ತು ಟಾಮ್ ವಡಕ್ಕನ್ ಅವರಂತಹ ನಾಯಕರ ಉದಾಹರಣೆಗಳನ್ನು ಉಲ್ಲೇಖಿಸಿದ ಅಜಿತ್, ಬಿಜೆಪಿ ಎಲ್ಲರನ್ನೂ ತಾತ್ಕಾಲಿಕವಾಗಿ ಬಳಸಿಕೊಳ್ಳುತ್ತದೆ ಮತ್ತು ಕರಿಬೇವಿನ ಎಲೆಗಳಂತೆ ಹೊರಹಾಕುತ್ತದೆ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!