ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಡವರಿಗೆ ರೂಪಿಸಲಾಗಿರುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಹೋಟೆಲ್ ಗಳಿಗೆ ಮಾರಾಟ ಮಾಡುವ ಅಯೋಗ್ಯರ ವಿರುದ್ಧ ಜಿಲ್ಲಾಧಿಕಾರಿಗಳು ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಮೌಖಿಕವಾಗಿ ಸೂಚಿಸಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ನ್ಯಾಯಪೀಠ, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಹೋಟೆಲ್ ಗಳಿಗೆ ಮಾರಾಟ ಮಾಡುವ ಮಾಫಿಯಾ ಬಗ್ಗೆ ತೀವ್ರವಾಗಿ ಕಿಡಿಕಾರಿದರು.
ಕಳ್ಳಸಾಗಣೆದಾರರು ಸರಕುಪಟ್ಟಿ, ಸಿ ಫಾರಂ ಮತ್ತು ರಸೀದಿಯಂತಹ ಅಗತ್ಯ ದಾಖಲೆಗಳಿಲ್ಲದೆ ಅಕ್ಕಿಯನ್ನು ಲಾರಿಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತಾರೆ. ಇಂತಹವರನ್ನು ಪತ್ತೆ ಹಚ್ಚಿದಾಗ ಅವರ ವಿರುದ್ಧ ತಕ್ಕ ಕ್ರಮ ಕೈಗೊಳ್ಳುವ ಅಧಿಕಾರ ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ಆದರೆ, ಅವರನ್ನು ಬಚಾವು ಮಾಡುವಂತಹ ವ್ಯವಸ್ಥೆ ಜೊತೆಯಲ್ಲಿಯೇ ಇರಲಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.