August 13, 2026
Thursday, August 13, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ । ಅರಿವಿಗೆ ಬಾರದ ನಿತ್ಯ ಚಮತ್ಕಾರ, ಜೀರ್ಣಕ್ರಿಯೆಯೇ ಅತಿದೊಡ್ಡ ಪವಾಡ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಹಾರವನ್ನು ಜೀರ್ಣವಾಗಿಸಿ ದೇಹಕ್ಕೆ ಚೈತನ್ಯವನ್ನು ತುಂಬುವುದು ಜಠರಾಗ್ನಿಯ ದೊಡ್ಡ ಪವಾಡವಾಗಿದ್ದು, ಸೇವಿಸಿದ ಆಹಾರವನ್ನೇ ದೇಹ ಹಾಗೂ ಜೀವಿಯ ಭಾವವನ್ನಾಗಿ ಪರಿವರ್ತಿಸುವುದು ನಿಜವಾಗಿ ಚಮತ್ಕಾರವೇ ಆಗಿದೆ. ಆದರೆ ಈ ಕ್ರಿಯೆ ನಿತ್ಯ ಸ್ವಯಂಚಾಲಿತವಾಗಿ ನಡೆಯುತ್ತಿರುವುದರಿಂದ ಇದು ದೊಡ್ದ ಪವಾಡ ಎಂದು ನಮಗೆ ಭಾಸವಾಗುತ್ತಿಲ್ಲವಷ್ಟೇ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯ ಗುರುವಾರದ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ‘ಜಠರಾಗ್ನಿ’ಯ ಕುರಿತಾಗಿ ಅವರು ಪ್ರವಚನ ಅನುಗ್ರಹಿಸಿದರು.

ವಾಹನದಲ್ಲಿ ‘ಸ್ಪಾರ್ಕ್ ಪ್ಲಗ್’ ಶಕ್ತಿಯನ್ನು ಹೊತ್ತಿಸಿ ವಾಹನ ಚಲಿಸುವಂತೆ ಮಾಡಿತ್ತದೆ. ಹಾಗೆಯೇ ಜಠರಾಗ್ನಿಯು ಆಹಾರವನ್ನು ಶಕ್ತಿಯಾಗಿಸಿ ದೇಹಕ್ಕೆ ಚೈತನ್ಯವನ್ನು ಒದಗಿಸುತ್ತದೆ. ಆಹಾರ ಸೇವನೆಯ ಬಳಿಕ ದೇಹದಲ್ಲಿ ಜೀರ್ಣಕ್ರಿಯೆ ಆರಂಭವಾಗುತ್ತದೆ. ಹಸಿವು, ಜೀರ್ಣಕ್ರಿಯೆ ಹಾಗೂ ದೇಹದ ಉಷ್ಣತೆಯೊಂದಿಗೆ ಜಠರಾಗ್ನಿಗೆ ಸಂಬಂಧವಿದೆ ಎಂದು ಭಾರತೀಯ ವೈದ್ಯಪರಂಪರೆ ವಿವರಿಸುತ್ತದೆ. ಈ ಅಗ್ನಿಯ ಸಮತೋಲನದಲ್ಲಿ ವ್ಯತ್ಯಯ ಉಂಟಾದರೆ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ದೇವರಿಗೆ ನೈವೇದ್ಯ ಅರ್ಪಿಸಿ ಆಹಾರ ಸೇವಿಸುವ ಪದ್ಧತಿಯು ಆಹಾರದ ಬಗ್ಗೆ ಗೌರವ ಮತ್ತು ಕೃತಜ್ಞತೆಯ ಭಾವನೆಯನ್ನು ಬೆಳೆಸುವ ಆಚರಣೆಯಾಗಿದೆ. ಆಹಾರವನ್ನು ದೇಹಕ್ಕೆ ಸೇರುವ ವಸ್ತುವಾಗಿ ಮಾತ್ರವಲ್ಲದೆ, ಜೀವನವನ್ನು ಪೋಷಿಸುವ ಪವಿತ್ರ ಅಂಶವಾಗಿ ನೋಡುವ ದೃಷ್ಟಿಕೋನವನ್ನು ಈ ಪರಂಪರೆ ನೀಡುತ್ತದೆ ಎಂದು ಶ್ರೀಗಳು ತಿಳಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯ ಮೂಲಗಳನ್ನು ದೇವರೆಂದು ಭಾವಿಸಲಾಗಿದೆ. ಆಹಾರವನ್ನು ಜೀರ್ಣವಾಗಿಸಿ, ದೇಹಕ್ಕೆ ಶಕ್ತಿತುಂಬುವ ಜಠರಾಗ್ನಿಯನ್ನೂ ದೇವರೆಂದೇ ಪರಿಭಾವಿಸಲಾಗಿದ್ದು, ಬ್ರಹ್ಮ ರೂಪಾವಾದ ಅನ್ನವನ್ನೇ ಜೀರ್ಣಮಾಡಿತ್ತದೆ ಎಂದರೆ ಅಗ್ನಿಯು ಅಷ್ಟೇ ದೊಡ್ದ ಶಕ್ತಿಯಾಗಿರಲೇ ಬೇಕು. ಆಧುನಿಕ ವಿಜ್ಞಾನವು ಜಠರಾಗ್ನಿಯನ್ನು ‘ಸ್ಟೊಮಕ್ ಆಸಿಡ್’ ಎಂದು ಹೇಳಿದ್ದು, ಇದು ಅಗ್ನಿಯ ಗುಣಲಕ್ಷಣಗಳನ್ನೇ ಹೊಂದಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಜಠರಾಗ್ನಿಯೇ ದೇವರು

ವೇದದ ಭಾಗವಾದ ಮಹಾನಾರಾಯಣೋಪನಿಷತ್ತಿನ ನಾರಾಯಣ ಸೂಕ್ತದಲ್ಲಿ ಜಠರಾಗ್ನಿಯನ್ನು ದೇವರೆಂದೇ ಪ್ರತಿಪಾದಿಸಲಾಗಿದ್ದು, ಭಗವದ್ಗೀತೆಯಲ್ಲಿ ನಾನೇ ಜಠರಾಗ್ನಿಯಾಗಿದ್ದೇನೆ ಎಂದು ಸ್ವಯಂ ಭಗವಂತನೇ ಹೇಳಿದ್ದಾನೆ. ಹಾಗೂ ಆಯುರ್ವೇದದ ಆಚಾರ್ಯರೂ ಕೂಡ ಜಠರಾಗ್ನಿಗೆ ಮಹತ್ವದ ಸ್ಥಾನ ನೀಡಿದ್ದಾರೆ. ದೇವರ ಕೋಣೆಯಲ್ಲಿ ವ್ಯವಸ್ಥೆ ಸರಿಯಿಲ್ಲದೇ ಇದ್ದರೆ ಅಲ್ಲಿ ದೇವರು ಇಲ್ಲದೇ ಇರಬಹುದು. ಆದರೇ ಪ್ರತಿಯೊಂದು ಜೀವಿಯೊಳಗೆ ಅಗ್ನಿರೂಪದಲ್ಲಿ ಭಗವಂತ ನೆಲಸಿದ್ದಾನೆ ಎಂದು ಶ್ರೀಗಳು ನಿರೂಪಿಸಿದರು.

ಮಾಜಿ ಸಚಿವ ಶಿವಾನಂದ ನಾಯ್ಕ ಭಟ್ಕಳ, ಪಶ್ಚಿಮಘಟ್ಟ ಕಾರ್ಯಪಡೆ ನಿಗಮದ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಸಾಮಾಜಿಕ ಕಾರ್ಯಕರ್ತ ಡಾ.ಜಿ.ಜಿ. ಹೆಗಡೆ, ಜಿ.ಎಸ್ ಹೆಗಡೆ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಶ್ರೀಗಳಿಂದ ಆಶೀರ್ವಾದ ಪಡೆದರು.

ಕುಮಟಾ ಹವ್ಯಕ ಮಂಡಲದ ಮೂರೂರುಕಲ್ಲಬೆ, ಹೆಗಡೆ, ಗುಡೆ ಅಂಗಡಿ, ಉಪ್ಪಿನ ಪಟ್ಟಣ, ಗೋವಾ, ಅಚವೆ ಹವ್ಯಕ ವಲಯಗಳ ಪರವಾಗಿ ದತ್ತಾತ್ರೆಯ ಚಂದ್ರಶೇಖರ್ ಭಟ್ ದಂಪತಿಗಳು ಶ್ರೀಗುರುಭಿಕ್ಷಾ ಸೇವೆ ಸಮರ್ಪಿಸಿದರು. ವೇ.ಮೂ. ಕೇಶವಪ್ರಸಾದ್ ಭಟ್ಟ ಕೂಟೇಲು, ಜಿ. ಎಸ್. ಭಟ್ಟ ಉಪ್ಪುಂದ, ಸೌಮ್ಯ ಮಧ್ಯಸ್ಥ, ದಿನ ಪ್ರಧಾನರಾದ ಸುಬ್ರಾಯ ಹೆಗಡೆ ಮಾನ್ಯ ದಂಪತಿಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !