ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಜಾವೆಲಿನ್ ಆಟಗಾರರು ಅದ್ಭುತ ಪ್ರದರ್ಶನದ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಫೈನಲ್ನಲ್ಲಿ ಯಶ್ವೀರ್ ಸಿಂಗ್ ಬೆಳ್ಳಿ ಹಾಗೂ ರೋಹಿತ್ ಯಾದವ್ ಕಂಚಿನ ಪದಕ ಗೆದ್ದು ಭಾರತಕ್ಕೆ ಡಬಲ್ ಪೋಡಿಯಂ ತಂದುಕೊಟ್ಟಿದ್ದಾರೆ.
ಶ್ರೀಲಂಕಾದ ರುಮೇಶ್ ಪತಿರಾಗೆ 88.55 ಮೀಟರ್ ಎಸೆತದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
24 ವರ್ಷದ ಯಶ್ವೀರ್ ಸಿಂಗ್ ತಮ್ಮ ಆರನೇ ಹಾಗೂ ಕೊನೆಯ ಪ್ರಯತ್ನದಲ್ಲಿ 85.72 ಮೀಟರ್ ದೂರ ಜಾವೆಲಿನ್ ಎಸೆದು ವೈಯಕ್ತಿಕ ಶ್ರೇಷ್ಠ ಸಾಧನೆ ದಾಖಲಿಸಿದರು. ಈ ಎಸೆತದ ಮೂಲಕ ಅವರು ತಮ್ಮದೇ ತಂಡದ ಸಹ ಆಟಗಾರ ರೋಹಿತ್ ಯಾದವ್ ಅವರ 84.35 ಮೀಟರ್ ಸಾಧನೆಯನ್ನು ಹಿಂದಿಕ್ಕಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಇದನ್ನೂ ಓದಿ:
25 ವರ್ಷದ ರೋಹಿತ್ ಯಾದವ್ 84.35 ಮೀಟರ್ ದೂರದ ಎಸೆತದೊಂದಿಗೆ ಮೂರನೇ ಸ್ಥಾನ ಪಡೆದರು. ಕೊನೆಯ ಸುತ್ತಿನವರೆಗೂ ಬೆಳ್ಳಿ ಪದಕದ ಸ್ಥಾನದಲ್ಲಿದ್ದ ರೋಹಿತ್ ಅವರನ್ನು ಅಂತಿಮ ಪ್ರಯತ್ನದಲ್ಲಿ ಯಶ್ವೀರ್ ಹಿಂದಿಕ್ಕಿದರು. ಹೀಗಾಗಿ ಒಂದೇ ಸ್ಪರ್ಧೆಯಲ್ಲಿ ಇಬ್ಬರು ಭಾರತೀಯರು ವೇದಿಕೆ ಹಂಚಿಕೊಂಡರು.
ಇತ್ತ ಶ್ರೀಲಂಕಾದ ರುಮೇಶ್ ಪತಿರಾಗೆ ಆರಂಭಿಕ ಪ್ರಯತ್ನಗಳಲ್ಲಿ 83.34 ಮೀಟರ್ನಷ್ಟೇ ಸಾಧನೆ ಮಾಡಿದ್ದರು. ಆದರೆ ಕೊನೆಯ ಹಂತದಲ್ಲಿ ತಮ್ಮ ಸಾಮರ್ಥ್ಯ ತೋರಿಸಿದ ಅವರು 88.33 ಮೀಟರ್ ಬಳಿಕ 88.55 ಮೀಟರ್ ಎಸೆದು ಚಿನ್ನ ಖಚಿತಪಡಿಸಿಕೊಂಡರು. ಈ ಮೂಲಕ ಪ್ರಮುಖ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಮತ್ತೊಂದು ಚಿನ್ನದ ಪದಕ ತಮ್ಮ ಖಾತೆಗೆ ಸೇರಿಸಿಕೊಂಡರು.
ಚೋಪ್ರಾ ಅನುಪಸ್ಥಿತಿಯಲ್ಲಿ ಪದಕ
ಭಾರತದ ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ನೀರಜ್ ಚೋಪ್ರಾ ಗಾಯದ ಕಾರಣ ಈ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಯಶ್ವೀರ್ ಮತ್ತು ರೋಹಿತ್ ಭಾರತದ ಪದಕದ ನಿರೀಕ್ಷೆಯನ್ನು ಹೊತ್ತುಕೊಂಡು ಅಂಗಳಕ್ಕಿಳಿದಿದ್ದರು.



