September 26, 2026
Saturday, September 26, 2026
spot_img

ಸಂಸತ್ತಿನಲ್ಲಿ ಮೌನ, ಆಚರಣೆಗಳಲ್ಲಿ ಭಾಗಿ: ಪ್ರಧಾನಿ ಆಡಳಿತ ವೈಖರಿ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನಡೆದ ‘ಭಜನ್ ಕ್ಲಬ್ಬಿಂಗ್’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿರುವುದನ್ನು ಉಲ್ಲೇಖಿಸಿ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಯವರಿಗೆ ಇಂತಹ ಮನರಂಜನಾತ್ಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಮಯವಿದೆ, ಆದರೆ ದೇಶವನ್ನು ಕಾಡುತ್ತಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲು ಸಮಯವಿಲ್ಲ ಎಂದು ಅವರು ಆರೋಪಿಸಿದ್ದಾರೆ.

ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಪ್ರಧಾನಿ ಮೋದಿಯವರ ವಿರುದ್ಧ ಕಿಡಿಕಾರಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಭಜನ್ ಕ್ಲಬ್ಬಿಂಗ್’ ಕಾರ್ಯಕ್ರಮಗಳಿಗೆ ಹೋಗಲು ಸಮಯವಿದೆ. ಆದರೆ, ಚುನಾವಣಾ ಆಯೋಗದ ವಿಚಾರದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಹತ್ತಿಕ್ಕುತ್ತಿರುವ ಬಗ್ಗೆ ಕೇಳಲಾಗುತ್ತಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲು ಅವರ ಬಳಿ ಸಮಯವಿಲ್ಲ,” ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಪ್ರಧಾನಿ ಮೋದಿ ಅವರು ಕಳೆದ 13 ವರುಷಗಳಿಂದ ಯಾವುದೇ ಗಂಭೀರ ಪ್ರಶ್ನೆಗಳನ್ನು ಎದುರಿಸದೆ ಜಾರಿಕೊಳ್ಳುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ದೂರಿದ್ದಾರೆ. “ಸರ್ಕಾರದ ಮುಂದೆ ಯಾವುದೇ ಸವಾಲಿನ ಅಥವಾ ಕಠಿಣ ಪ್ರಶ್ನೆಗಳು ಎದುರಾದಾಗ ಪ್ರಧಾನಿಯವರು ಮೌನಕ್ಕೆ ಶರಣಾಗುತ್ತಾರೆ ಅಥವಾ ಅಲ್ಲಿಂದ ದೂರ ಉಳಿಯುತ್ತಾರೆ. ಸಂಭ್ರಮಾಚರಣೆಗಳು ಅಥವಾ ಕಾರ್ಯಕ್ರಮಗಳಿದ್ದಾಗ ಮಾತ್ರ ಅವರು ಪ್ರತ್ಯಕ್ಷರಾಗುತ್ತಾರೆ. ಸಂಭ್ರಮಕ್ಕೆ ಪ್ರಧಾನಿಯವರ ಉಪಸ್ಥಿತಿಯಿರುತ್ತದೆ, ಆದರೆ ಉತ್ತರ ಹೊಣೆಗಾರಿಕೆ ಬಂದಾಗ ಮೌನವೇ ಅವರ ಉತ್ತರವಾಗಿರುತ್ತದೆ,” ಎಂದು ಟೀಕಿಸಿದ್ದಾರೆ.

Must Read