September 8, 2026
Tuesday, September 8, 2026
spot_img

‘ಮನೆ ನಂಬರ್ ಕಿತ್ತುಕೊಂಡ್ರೆ ಬಡವರ ಬದುಕೇ ಅತಂತ್ರ’: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಹೊಸದಿಗಂತ ವರದಿ ಯಲ್ಲಾಪುರ:

ಗ್ರಾಮೀಣ ಜನರ ವಸತಿ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಬಿಜೆಪಿ ಯಿಂದ ಬಲವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಸಂಜೆ ಟಿ ಎಂ ಎಸ್ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಪಂ ವ್ಯಾಪ್ತಿಯಲ್ಲಿರುವ ಸರ್ಕಾರಿ, ಅರಣ್ಯ ಹಾಗೂ ಸರ್ಕಾರದ ಒಡೆತನ ಮತ್ತು ನಿಯಂತ್ರಣದಲ್ಲಿರುವ ಜಾಗಗಳಲ್ಲಿ ವಸತಿ ಉದ್ದೇಶಕ್ಕಾಗಿ ನೀಡಲಾಗಿರುವ, ಮನೆ ನಂಬರ್‌ಗಳನ್ನು ರದ್ದುಗೊಳಿಸಿ ತೆರಿಗೆ ಆಕರಣೆ ಮಾಡಬಾರದು ಎಂಬ ನಿರ್ಧಾರವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಕೈಗೊಂಡಿರುವುದು ಜನರನ್ನು ವಸತಿ ರಹಿತರನ್ನಾಗಿ ಮಾಡುವ ಹುನ್ನಾರವಾಗಿದೆ.

ಅತಿಕ್ರಮಣದಲ್ಲಿರುವ ಮನೆಗಳಿಗೆ ಮನೆ ನಂಬರ್ ದೊರೆತಿರುವುದು ಅಲ್ಲಿನ ನಿವಾಸಿಗಳಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಏಕೈಕ ಆಧಾರವಾಗಿದೆ. ಮನೆ ನಂಬ‌ರ್ ಹಾಗೂ ಇತರ ದಾಖಲೆಗಳನ್ನು ರದ್ದುಗೊಳಿಸಿದರೆ ಪಡಿತರ ಚೀಟಿ, ವಿದ್ಯುತ್ ಸಂಪರ್ಕ, ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಹಾಗೂ ಆಸ್ತಿ ನೋಂದಣಿ ಸೇರಿದಂತೆ ಹಲವು ಮೂಲಭೂತ ಹಕ್ಕುಗಳಿಂದ ಜನರು ವಂಚಿತರಾಗುತ್ತಾರೆ. ಆದ್ದರಿಂದ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದರು.

ಇದನ್ನೂ ಓದಿ:

ಮಂಡಲಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ ಬಡವರ ರಕ್ತ ಹೀರುತ್ತಿರುವ ಸರಕಾರ, ಗ್ಯಾರಂಟಿ ಆಮಿಷ ಒಡ್ಡಿ ಇದೀಗ ಅವರ ಮನೆಯನ್ನು ಕಿತ್ತು ಕೊಳ್ಳುತ್ತಿದೆ. ಇನ್ನೊಂದೆಡೆ ಬಡವರಿಗೆ ಇರುವ ಮನೆಗಳನ್ನು ಶ್ರೀಮಂತರಿಗೆ ನೀಡುತ್ತಿದೆ. ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಪ್ರಮುಖರಾದ ಉಮೇಶ್ ಭಾಗ್ವತ್, ರಾಘವೇಂದ್ರ ಭಟ್, ಕೆ ಟಿ ಹೆಗಡೆ, ವೆಂಕಟ ರಮಣ ಬೆಳ್ಳಿ,ಗಣೇಶ ಹೆಗಡೆ,ಉಮೇಶ್ ಉದ್ದಾ ನಬೈಲ್, ಮಹೇಶ ಇತರರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !